ಹಿಂಸಾತ್ಮಕವಾಗಿ ಗೋ ಅಕ್ರಮ ಸಾಗಾಟ

vhp
Published on

ಮಂಗಳೂರು: ಕುದ್ರೋಳಿ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವುದನ್ನು ಭಾನುವಾರ ಮುಂಜಾನೆ ಹಿಂದು ಸಂಘಟನೆ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಬರ್ಕೆ ಪೊಲೀಸರು ಪತ್ತೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸಾಗಾಟ ಮಾಡಿದ ಟೆಂಪೋ ಹಾಗೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಡುಬಿದ್ರಿ ಕಡೆಯಿಂದ 30ಕ್ಕೂ ಅಧಿಕ ಗಂಡು ಕರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಬಂದ ಟೆಂಪೋ ಮಂಗಳೂರು ನಗರದ ಕುಂಟಿಕಾನದಿಂದ ಲಾಲ್‌ಭಾಗ್-ಮಣ್ಣಗುಡ್ಡ ಮೂಲಕ ಕುದ್ರೋಳಿ ಕಸಾಯಿಖಾನೆಗೆ ಸಾಗಿದೆ. ಟೆಂಪೋ ಅತಿ ವೇಗವಾಗಿ ಸಾಗಿದ್ದು, ಈ ಸಂದರ್ಭ ಕುಂಟಿಕಾನ, ಲಾಲ್‌ಭಾಗ್, ಮಣ್ಣಗುಡ್ಡ ಮೊದಲಾದ ಕಡೆ ಹಂಪ್ಸ್‌ನಲ್ಲಿ ವಾಹನ ಹಾರಿದಾಗ 9 ಕರುಗಳು ಎಗರಿ ರಸ್ತೆಗೆ ಎಸೆಯಲ್ಪಟ್ಟಿದ್ದವು. ಗಾಯಗೊಂಡ ಅವುಗಳನ್ನು ಹಿಂದು ಸಂಘಟನೆಗಳು ರಕ್ಷಿಸಿದ್ದು, ಬೀಜದಗುರಿಯಲ್ಲಿರುವ ಗೋವನಿತಾಶ್ರಯಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ದಿಢೀರ್ ಪ್ರತಿಭಟನೆ: ಘಟನೆ ಮಾಹಿತಿ ತಿಳಿದ ಹಿಂದು ಸಂಘಟನೆ ಕಾರ್ಯಕರ್ತರು ಮಣ್ಣಗುಡ್ಡೆಯಲ್ಲಿ ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್ ಇಟ್ಟು, ಅಲ್ಲೇ ಕರುಗಳನ್ನು ಕಟ್ಟಿ ಹಾಕಿ ಪ್ರತಿಭಟನೆ ನಡೆಸಿದರು. ಜಾನುವಾರು ಸಾಗಾಟ ಮಾಡಿದ ಆರೋಪಿಗಳನ್ನು ಹಾಗೂ ಟೆಂಪೋವನ್ನು ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಉರ್ವ ಠಾಣೆ ಇನ್‌ಸ್ಪೆಕ್ಟರ್ ಶರೀಫ್ ಅವರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಸಾಯಿಖಾನೆಗೆ ತೆರಳಿ ಟೆಂಪೋ ಹಾಗೂ ಅದರಲ್ಲಿದ್ದ ಮೂವರನ್ನು ಬಂಧಿಸಿದ್ದಾರೆ. ಆದರೆ ಟೆಂಪೋದಲ್ಲಿದ್ದ ಕರುಗಳನ್ನು ಅಷ್ಟರಲ್ಲಿ ಕಸಾಯಿಖಾನೆಗೆ ಸಾಗಾಟದಾರರು ಮಾರಾಟ ಮಾಡಿದ್ದರು. ಅವುಗಳನ್ನು ವಶಕ್ಕೆ ಪಡೆಯುವುದು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಹಿಂದು ಸಂಘಟನೆ ಪ್ರಮುಖರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net