

ಮಡಿಕೇರಿ:
ಇಷ್ಟೊತ್ತಿಗಾಗಲೇ ಅಬ್ಬರಿಸುತ್ತಿರಬೇಕಾಗಿದ್ದ ಮಳೆರಾಯ ಕೊಡಗಿನಲ್ಲಿ ಶಾಂತವಾಗಿದ್ದಾನೆ. ಅಲ್ಲಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಬಹುತೇಕ ಊರುಗಳಲ್ಲಿ ಬಿಸಿಲು ಝಳಪಿಸುತ್ತಿದೆ. ಇದರಿಂದ ಜಾನುವಾರುಗಳ ಮೇವಿನ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು, ರೈತಾಪಿ ವರ್ಗದ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಸರ್ಕಾರ ಕೂಡ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.
ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿದೆ. ಈ ವರ್ಷ ವಾಡಿಕೆಗಿಂತ ಸುಮಾರು ಶೇ. ೫೦ರಷ್ಟು ಮಳೆ ಕಡಿಮೆ ಆಗಿರುವ ಬಗ್ಗೆ ಗೋಣಿಕೊಪ್ಪ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಕೊಡಗಿನಲ್ಲಿ ಬರದ ಛಾಯೆ ಕಾಣಿಸಿಕೊಳ್ಳುವುದರ ಜತೆಗೆ ಕೃಷಿ ಕಾರ್ಯಕ್ಕೂ ತೀವ್ರ ಹಿನ್ನಡೆ ಆಗಿದೆ. ಜಾನುವಾರುಗಳ ಮೇವು ಉತ್ಪಾದನೆ ಮೇಲೂ ಪರಿಣಾಮ ಬೀರಿದ್ದು, ಜಿಲ್ಲೆಯಲ್ಲಿ ಮೇವಿನ ಅಭಾವ ಉಂಟಾಗುವುದಲ್ಲದೆ ಮೇವಿನ ಬೆಲೆಯೂ ದುಬಾರಿ ಆಗುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
೨೦೨೦ರ ಪ್ರಾಣಿ ಗಣತಿ ಪ್ರಕಾರ ಕೊಡಗಿನಲ್ಲಿ ಹಸು, ಎಮ್ಮೆ ಸೇರಿದಂತೆ ದೊಡ್ಡ ಗಾತ್ರದ ಜಾನುವಾರುಗಳು ೭೨,೯೨೦ರಷ್ಟು ಸಂಖ್ಯೆಯಲ್ಲಿ ಇದೆ. ಕುರಿ, ಆಡು ಸೇರಿದಂತೆ ಸಣ್ಣಗಾತ್ರದ ಜಾನುವಾರುಗಳು ೮,೨೫೩ರಷ್ಟು ಇವೆ. ದೊಡ್ಡ ಗಾತ್ರದ ಜಾನುವಾರುಗಳಿಗೆ ದಿನಕ್ಕೆ ೬ ಕೆಜಿಯಂತೆ ಮತ್ತು ಸಣ್ಣ ಗಾತ್ರದ ಜಾನುವಾರುಗಳಿಗೆ ದಿನಕ್ಕೆ ೦.೫ ಕೆಜಿಯಂತೆ ವಾರಕ್ಕೆ ೩,೨೬೦ ಟನ್‌ಗಳಷ್ಟು ಆಹಾರ ಬೇಕಾಗುತ್ತದೆ. ಜಿಲ್ಲೆಯಲ್ಲಿ ೨೮ ವಾರಕ್ಕೆ ಅಗತ್ಯವಿರುವಷ್ಟು ೯೩,೩೬೪ ಟನ್ ಆಹಾರ ಲಭ್ಯವಿದೆ.
ರಾಗಿ ಹುಲ್ಲು, ಭತ್ತದ ಹುಲ್ಲು ಹಾಗೂ ಹಸಿ ಜೋಳದ ಹುಲ್ಲು ಮೇವಿನ ಲಭ್ಯತೆಯನ್ನು ಸರ್ಕಾರ ಅಂದಾಜಿಸಿದೆ. ರಾಗಿ ಹುಲ್ಲಿಗೆ ಸರ್ಕಾರ ಕೆಜಿಗೆ ೪-೬ ರೂ., ಭತ್ತದ ಹುಲ್ಲು ಕೆಜಿಗೆ ೪.೫೦-೬ ರೂ., ಹಾಗೂ ಹಸಿ ಜೋಳದ ಹುಲ್ಲಿಗೆ ಕೆಜಿಗೆ ೧.೫೦ ರೂ. ನಿಗದಿಪಡಿಸಿದೆ.
ಮಾರುಕಟ್ಟೆಯಲ್ಲಿ ರಾಗಿ ಹುಲ್ಲಿಗೆ ಕೆಜಿಗೆ ೮-೧೦ ರೂ., ಭತ್ತದ ಹುಲ್ಲು ಕೆಜಿಗೆ ೭-೯ ರೂ., ಹಸಿ ಜೋಳದ ಹುಲ್ಲು ಕೆಜಿಗೆ ೩-೫ ರೂ. ಇತ್ತು. ಇದೀಗ ಮೇವಿನ ಅಭಾವದ ಸೂಚನೆಗಳು ಸಿಗುತ್ತಿದ್ದಂತೆಯೇ ಮೇವಿನ ದರದಲ್ಲೂ ನಿಧಾನಕ್ಕೆ ಹೆಚ್ಚಳ ಕಂಡುಬರುತ್ತಿದೆ. ರಾಗಿ ಹುಲ್ಲು ಕೆಜಿಗೆ ೧೦-೧೩.೫೦ ರೂ., ಭತ್ತದ ಹುಲ್ಲು ೮-೧೩.೫೦ ರೂ., ಹಸಿ ಜೋಳದ ಹುಲ್ಲು ೫-೬ ರೂ.ಗೆ ಮಾರಾಟವಾಗುತ್ತಿದೆ. ಕೆಲವೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಮೇವು ಸಂಗ್ರಹಿಸಲಾಗುತ್ತಿದ್ದು, ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಕಂಡುಬರುತ್ತಿದೆ.
ಸದ್ಯದ ಸ್ಥಿತಿಯಲ್ಲಿ ಮೇವಿನ ಕೊರತೆ ಎಲ್ಲಿಯೂ ಕಂಡುಬರುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ದರ ನಿಯಂತ್ರಣಕ್ಕೂ ಸರ್ಕಾರ ಮುಂದಡಿ ಇಟ್ಟಿದೆ.
ಬರದ ಸ್ಥಿತಿ ಮುಂದುವರಿದು ಭವಿಷ್ಯದಲ್ಲಿ ಮೇವಿನ ಅವಶ್ಯಕತೆ ಕಂಡುಬಂದಲ್ಲಿ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಮೇವಿನ ಬ್ಯಾಂಕ್ ಸ್ಥಾಪಿನೆಗೂ ಸರ್ಕಾರ ಚಿಂತನೆ ನಡೆಸಿದೆ. ಮೇವಿನ ಬ್ಯಾಂಕ್ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಮೇವು ಪೂರೈಸಲೂ ಸಿದ್ಧತೆ ನಡೆಸಿರುವ ಮಾಹಿತಿ ಸಿಕ್ಕಿದೆ. ಮೇವಿನ ಬೀಜದ ಕಿರುಪೊಟ್ಟಣಗಳನ್ನು ವಿತರಿಸಿ ಹಸಿರು ಮೇವು ಉತ್ಪಾದಿಸಲು ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆಯೂ ಇದೆ.
ಗೋಶಾಲೆಗಳಲ್ಲಿರುವ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆಯೂ ಸರ್ಕಾರ ಎಚ್ಚರಿಕೆ ವಹಿಸಿದೆ. ಪುಣ್ಯಕೋಟಿ ದತ್ತು ಯೋಜನೆ ಅಡಿಯಲ್ಲಿ ಒಂದು ವ?ರ್ಕ್ಕೆ ಒಂದು ಜಾನುವಾರು ನಿರ್ವಹಣೆಗೆ ೧೧ ಸಾವಿರ ರೂ.ಗಳನ್ನು ಸರ್ಕಾರ ಕೊಡುತ್ತಿದ್ದು ರಾಜ್ಯದ ೨೦೦ ಗೋಶಾಲೆಗಲ್ಲಿರುವ ೨೪೮೬೭ ಜಾನುವಾರುಗಳಿಗೆ ಏಪ್ರಿಲ್ ತಿಂಗಳಿನಲ್ಲಿ ೨೭.೩೬ ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.
ಪಿಂಜರಾಪೋಲ್ ಮತ್ತು ಇತರ ಗೋಶಾಲೆಗಳಿಗೆ ನೆರವು ಕಾರ್ಯಕ್ರಮದಡಿಯಲ್ಲಿ ರಾಜ್ಯದ ೨೨೮ ಖಾಸಗಿ ಗೋಶಾಲೆಗಳಲ್ಲಿರುವ ಜಾನುವಾರು ಹಾಗೂ ಕರುಗಳು, ಅನಧಿಕೃತ ಜಾನುವಾರು ಸಾಗಾಣಿಕೆ ಸಮಯದಲ್ಲಿ ಪೊಲೀಸರು ವಶವಡಿಸಿಕೊಂಡ ಜಾನುವಾರುಗಳ ನಿರ್ವಹಣೆಗೆ ೨೦೨೨-೨೩ನೇ ಸಾಲಿನಲ್ಲಿ ಒಟ್ಟು ೩.೭೭ ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಮೇವಿನ ಕೊರತೆ ಸಮಸ್ಯೆ ಎದುರಾಗದಂತೆ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.
ಕೊಡಗಿನಲ್ಲಿ ಹೈನುಗಾರಿಕೆ ಅಷ್ಟಾಗಿ ಜನಪ್ರಿಯವಾಗಿಲ್ಲ. ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಸ್ವಲ್ಪಮಟ್ಟಿಗೆ ಹಸು ಸಾಕಾಣಿಕೆ ನಡೆಯುತ್ತಿದ್ದು ರೈತರು ಡೇರಿಗೆ ಹಾಲು ಪೂರೈಕೆ ಮಾಡುತ್ತಿದ್ದಾರೆ. ಬಹುತೇಕರು ಮನೆ ಬಳಕೆಗೆ ಅಗತ್ಯವಿರುವಷ್ಟು ಹಾಲಿಗಾಗಿ ಹಸುಗಳನ್ನು ಸಾಕಿಕೊಂಡಿದ್ದಾರೆ. ಉಳುಮೆಗಾಗಿ ಎತ್ತುಗಳನ್ನು ಸಾಕುವುದು ಕಡಿಮೆ ಆಗಿದ್ದರೂ ಹಿಂದಿನಿಂದ ಬಂದ ಸಂಪ್ರದಾಯ ಎಂಬಂತೆ ದನ ಸಾಕುತ್ತಿರುವವರನ್ನು ಅಲ್ಲಲ್ಲಿ ಕಾಣಬಹುದಾಗಿದೆ.
ಜಾನುವಾರುಗಳಿಗೆ ಮೇವು ಸಮಸ್ಯೆ ಆದರೆ ಇಲ್ಲಿನ ಹಾಲು ಉತ್ಪಾದಕರು ಸಮಸ್ಯೆ ಎದುರಿಸಬೇಕಾಗಬಹುದು. ಕೊಡಗಿನಲ್ಲಿ ದಿನಕ್ಕೆ ೪೯ ಸಾವಿರ ಲೀಟರ್‌ಗಳಷ್ಟು ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಇದೆ. ಆದರೆ ಜಿಲ್ಲೆಯಲ್ಲಿ ದಿನಂಪ್ರತಿ ಉತ್ಪಾದನೆ ಆಗಿ ಡೇರಿಗೆ ಬರುವುದು ಸುಮಾರು ೧೨ ಸಾವಿರ ಲೀಟರ್ ಹಾಲು ಮಾತ್ರ. ಕೊಡಗಿನ ಗಡಿಯಲ್ಲಿರುವ ಅರಕಲಗೂಡು ಮತ್ತು ಸಕಲೇಶಪುರ ತಾಲೂಕುಗಳಿಂದ ೩೦ ಸಾವಿರ ಲೀಟರ್ ಹಾಲು ಸಂಗ್ರಹಿಸಿ ಬೇಡಿಕೆ ಪೂರೈಸಲಾಗುತ್ತಿದೆ.
ರಾಜ್ಯದಲ್ಲಿ ಪ್ರಸ್ತುತ ಮೇವಿನ ಕೊರತೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಉಂಟಾದಲ್ಲಿ ದರ ನಿಯಂತ್ರಣಕ್ಕೆ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮೇವಿನ ಅವಶ್ಯಕತೆ ಕಂಡುಬಂದಲ್ಲಿ ಆದ್ಯತೆ ಮೇರೆಗೆ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸಿ ರೈತರಿಗೆ ರಿಯಾಯಿತಿ ದರದಲ್ಲಿ ಮೇವು ಪೂರೈಸಿ ಮೇವಿನ ದರಗಳನ್ನು ನಿಯಂತ್ರಿಸಲು ಕ್ರಮವಹಿಸಲಾಗುವುದು. ಮೇವಿನ ಬೀಜ ಕಿರುಪೊಟ್ಟಣಗಳನ್ನು ವಿತರಿಸಿ ಹಸಿರು ಮೇವು ಉತ್ಪಾದಿಸಲು ರೈತರಿಗೆ ಅನುವು ಮಾಡಿಕೊಡಲಾಗುವುದು.
ಕೆ. ವೆಂಕಟೇಶ್, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ