

ವಿಜಯವಾಣಿ ಸುದ್ದಿಜಾಲ ತೂಬಗೆರೆ
ದಕ್ಷಿಣ ಭಾರತದಲ್ಲಿ ನಾಗಾರಾಧನೆಗೆ ಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲೇ ಅಷ್ಟೇ ಪ್ರಸಿದ್ಧಿ ಪಡೆದಿರುವ ದನಗಳ ಜಾತ್ರೆ ಡಿ.20ರಂದು ಪ್ರಾರಂಭವಾಗಲಿದ್ದು, ಜಾತ್ರೆಗೆ ಸಕಲ ಸಿದ್ಧತೆ ಆರಂಭವಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ದನಗಳ ಜಮಾವಣೆಯಾಗುವ ನಿರೀಕ್ಷೆ ಗರಿಗೆದರಿದ್ದು ದನಗಳ ಜಾತ್ರೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ 7 ದಿನಗಳ ಕಾಲ ನಡೆಯುವ ದನಗಳ ಜಾತ್ರೆಗೆ ತಮಿಳುನಾಡು, ಆಂಧ್ರ ಸೇರಿ ರಾಜ್ಯದ ನಾನಾ ಕಡೆಗಳಿಂದ ಎತ್ತುಗಳನ್ನು ಕೊಳ್ಳಲು ರೈತರು ಆಗಮಿಸುತ್ತಾರೆ. ಕರೊನಾ ಸಂದರ್ಭದಲ್ಲಿ ಘಾಟಿ ಜಾತ್ರೆಗೆ ಹೊಳಪು ಕಳೆದುಕೊಂಡಿತ್ತು. ಆದಾದ ಎರಡು ವರ್ಷ ನಿರೀಕ್ಷೆಯಷ್ಟು ಜಾನುವಾರುಗಳ ಜಮಾವಣೆ ಕಂಡುಬಂದಿರಲಿಲ್ಲ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ದನಗಳು ಜಮಾವಣೆಯಾಗುವ ನಿರೀಕ್ಷೆ ಹೆಚ್ಚಿದೆ.
ಯಾವುದೇ ಸುಂಕವಿಲ್ಲ: ಜಾತ್ರೆಗೆ ಬರುವ ರೈತರಿಗೆ ದೇವಾಲಯದ ವತಿಯಿಂದ ಕುಡಿಯುವ ನೀರು, ರೈತರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುತ್ತದೆ, ಜಾತ್ರೆಯ ಸ್ಥಳದಲ್ಲಿ ವಿದ್ಯುತ್ ವ್ಯವಸ್ಥೆ ಇರಲಿದೆ ಜ.5ಕ್ಕೆ ತುಳು ಷಷ್ಠಿಯೆಂದು ಸ್ವಾಮಿಯ ಬ್ರಹ್ಮರಥೋತ್ಸವ ಇರುತ್ತದೆ. ಆಗ ಭಕ್ತರಿಗೆ ವಿಶೇಷ ದರ್ಶನ, ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ. ಜಾತ್ರೆಗೆ ಬರುವ ಎತ್ತುಗಳಿಗೆ ಯಾವುದೇ ಸುಂಕವಿಲ್ಲ ಎಂದು ಘಾಟಿ ದೇವಾಲಯದ ಅಧಿಕಾರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ರಾಶುಗಳಿಗೆ ತಾತ್ಕಾಲಿಕ ಚಿಕಿತ್ಸಾಲಯ: ನೆರೆಹೊರೆ ಜಿಲ್ಲೆ ಸೇರಿ ನೆರೆ ರಾಜ್ಯದಿಂದಲೂ ವಿವಿಧ ತಳಿಯ ಜಾನುವಾರುಗಳು ಜಮಾಯಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪಶುಪಾಲನಾ ಇಲಾಖೆ ತಾತ್ಕಾಲಿಕ ಪಶು ಚಿಕಿತ್ಸಾಲಯ ತೆರೆಯಲಿದೆ. ಈಗಾಗಲೇ ಜಿಲ್ಲೆಯಲ್ಲಿ ಚರ್ಮಗಂಟು ಹಾಗೂ ಕಾಲುಬಾಯಿ ಲಸಿಕಾ ಅಭಿಯಾನ ಯಶಸ್ವಿಗೊಳಿಸಿರುವ ಪಶುಪಾಲನಾ ಇಲಾಖೆ ಜಾತ್ರೆಯಲ್ಲಿ ಜಮಾವಣೆಗೊಳ್ಳುವ ರಾಸುಗಳ ತಪಾಸಣೆ ನಡೆಸಿ ಲಸಿಕೆ ಹಾಕದಿರುವ ರಾಸುಗಳಿಗೆ ಸ್ಥಳದಲ್ಲೇ ಲಸಿಕೆ ಹಾಕುವ ಸಿದ್ದತೆ ಮಾಡಿಕೊಂಡಿದೆ. ಇದರೊಂದಿಗೆ ಎಂದಿನಂತೆ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ನಡೆಯಲಿದ್ದು ಉತ್ತಮ ರಾಸುಗಳ ಆಯ್ಕೆಗೆ ಬೇರೆ ಜಿಲ್ಲೆಯ ಪಶು ವೈದ್ಯಾಧಿಕಾರಿಗಳ ಕಮಿಟಿ ರಚಿಸಲು ಸಿದ್ದತೆ ನಡೆದಿದೆ. ಜಾತ್ರೆ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಇಲಾಖೆ ಮತ್ತಷ್ಟು ಸಿದ್ದತೆ ನಡೆಸಲಿದೆ ಎಂದು ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಜಗದೀಶ್ ತಿಳಿಸಿದ್ದಾರೆ.
ನಾಗಾರಾಧನೆಯ ಪ್ರಸಿದ್ಧ ಕ್ಷೇತ್ರ: ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವ ಜ 5 ರಂದು ನಡೆಯಲಿದೆ, ಅಂದು ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ, ಇನ್ನು ದೇವಾಲಯ ವತಿಯಿಂದ ಬ್ರಹ್ಮರಥೋತ್ಸವ ಪ್ರಯುಕ್ತ ಬರುವ ಭಕ್ತರಿಗೆ ಅನ್ನ ಸಂತರ್ಪಣೆ, ವಾಹನಗಳ ನಿಲುಗಡೆ ಮತ್ತಿತರ ಸೌಲಭ್ಯಗಳ ಸಿದ್ದತೆ ನಡೆಯಲಿದೆ. ಬ್ರಹ್ಮರಥೋತ್ಸವ ಪ್ರಯುಕ್ತ ದೇವಾಲಯವನ್ನು ದೀಪಾಲಂಕಾರದಿಂದ ಸಿಂಗರಿಸಿ ಸ್ವಾಮಿಗೆ ವಿಶೇಷ ಅಭಿಷೇಕ ಹೋಮ ನಡೆಯಲಿದ್ದು, ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಟಾಪಿಸಿ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ.
--