

ಚನ್ನಗಿರಿ: ತಾಲೂಕಿನ 545 ಬ್ಲಾಕ್‌ಗಳ 54,500 ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಲಾಗುತ್ತಿದೆ ಎಂದು ತಾಲೂಕು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಿ.ಬಿ. ಅಶೋಕ್‌ಕುಮಾರ್ ಹೇಳಿದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ 6ನೇ ಸುತ್ತಿನ ಕಾಲುಬಾಯಿ ಜ್ವರ ನಿಯಂತ್ರಕ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಬುಧವಾರ ಚನ್ನಗಿರಿಯಲ್ಲಿ ಹಸುವಿಗೆ ಲಸಿಕೆ ಹಾಕಿ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮಕ್ಕೆ ನಿಯೋಜಿತ ಅಧಿಕಾರಿಗಳು, ಲಸಿಕೆದಾರರು ಜಾನುವಾರು ಮಾಲೀಕರ ಸಂಪೂರ್ಣ ಮಾಹಿತಿ ಪಡೆಯಬೇಕು. ಜಾನುವಾರುಗಳಿಗೆ ಲಸಿಕೆ ಹಾಕಿದ ಬಳಿಕ ಕಿವಿಯೋಲೆ ಅಳವಡಿಸಿ ಕಡ್ಡಾಯವಾಗಿ ಸಂಖ್ಯೆ ನಮೂದು ಮಾಡಬೇಕು ಎಂದರು.
ನಾಲ್ಕು ತಿಂಗಳ ಕರುಗಳು, ಗರ್ಭಧರಿಸಿದ ರಾಸುಗಳು ಮತ್ತು ರೋಗಬಾಧಿತ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದಿಲ್ಲ. ಹೊಸದಾಗಿ ಸೇರ್ಪಡೆಯಾದ ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಬೇಕು. ಕೈಬಿಡಲಾದ ಮತ್ತು ನಿರಾಕರಿಸಲಾದ ರಾಸುಗಳನ್ನು ಕೂಬಿಂಗ್ ಸಮಯದಲ್ಲಿ ಲಸಿಕೆ ಹಾಕಲು ನಿಯೋಜಿತ ಸಿಬ್ಬಂದಿ ಸಿದ್ಧರಿರಬೇಕು ಎಂದರು.
ಪಶು ಇಲಾಖೆ ವೈದ್ಯ ಡಾ. ಅಲಿ, ಮಲ್ಲಿಕಾರ್ಜುನ, ಲೋಕೇಶ್, ಗೋವಿಂದನಾಯ್ಕ ಇತರರಿದ್ದರು.