ಬಂಟ್ವಾಳ: ಕೊಡ್ಮಾಣ್‌ನಿಂದ ಬೆಂಜನಪದವಿನ ಶಾಂತಿನಗರಕ್ಕೆ ಪಿಕ್‌ಅಪ್‌ನಲ್ಲಿ 6 ಜಾನುವಾರುಗಳನ್ನು ಸಾಗಾಟ ಮಾಡುವ ವೇಳೆ ಒಂದು ಜಾನುವಾರು ಮೃತಪಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜಾನುವಾರುಗಳ ಹಿಂಸಾತ್ಮಕ ರೀತಿಯ ಸಾಗಾಟ ಹಾಗೂ ಹಲ್ಲೆ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಸಾಗಾಟಕ್ಕೆ ಸಂಬಂಧಿಸಿ ಧನುಪೂಜೆಯ ಚೆನ್ನಪ್ಪ ಪೂಜಾರಿ ವಿರುದ್ಧ ಸುಮೊಟೊ ಪ್ರಕರಣ ದಾಖಲಾಗಿದೆ. ಸಾಗಾಟ ಸಂದರ್ಭ ದನ ಸತ್ತಿರುವ ವಿಚಾರಕ್ಕೆ ಸಂಬಂಧಿಸಿ ಆರೋಪಿಗಳಾದ ದೇವು, ಕಲ್ಪನೆಯ ನಾಗೇಶ ಹಾಗೂ ಕೊಡ್ಮಾಣ್‌ನ ತಮ್ಮು ಅವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಧನುಪೂಜೆ ನಿವಾಸಿ ಚೆನ್ನಪ್ಪ ಪೂಜಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಜಾನುವಾರುಗಳನ್ನು ಸಾಗಾಟ ಮಾಡಿದ ವೇಳೆ ಯಾವುದೋ ಕಾರಣದಿಂದ ಒಂದು ಜಾನುವಾರು ಸತ್ತಿದ್ದು, ಅದನ್ನು ಹೂಳುವುದಕ್ಕೆ ಸಿದ್ಧತೆ ಮಾಡುವ ವೇಳೆ ಆರೋಪಿಗಳು ತನ್ನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಗಾಯಗೊಂಡ ತಾನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.