ಗೋದಾಮಿನಲ್ಲಿ ಜಾನುವಾರುಗಳ ಮೂಳೆ ಸಂಗ್ರಹ: ಪೌಡರ್ ತಯಾರಿಸುವ ಜಾಲ ಸಕ್ರಿಯ?

Cattle bone Mandya
Published on

ಮಂಡ್ಯ: ಜಿಲ್ಲೆಯಲ್ಲಿ ಆಲೆಮನೆಯಲ್ಲಿ ಭ್ರೂಣ ಲಿಂಗ ಸ್ಕಾೃನಿಂಗ್ ಮಾಡುತ್ತಿರುವ ದಂಧೆ ಬೆಳಕಿಗೆ ಬಂದ ಬೆನ್ನಲ್ಲೇ ಜಮೀನಿನ ಗೋದಾಮಿನಲ್ಲಿ ಪ್ರಾಣಿಗಳ ಮೂಳೆಗಳನ್ನು ಸಂಗ್ರಹಿಸಿ ತಂದು ಪೌಡರ್ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ.

ತಾಲೂಕಿನ ತೂಬಿನಕೆರೆ ಗ್ರಾಮದ ಹೊರವಲಯದಲ್ಲಿರುವ ಲಿಂಗರಾಜು ಎಂಬುವರ ಜಮೀನಿನಲ್ಲಿದ್ದ ಗೋದಾಮನ್ನು ಬಾಡಿಗೆಗೆ ಪಡೆದ ಖಾಸಗಿ ವ್ಯಕ್ತಿಗಳು ದನ, ಎಮ್ಮೆ ಮೂಳೆಗಳು ಮತ್ತು ತಲೆಗಳನ್ನು ಸಂಗ್ರಹಿಸಿ ಮೈದಾನದಲ್ಲಿ ಒಣಗಿಸುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಳೆದ ಒಂದು ವಾರದಿಂದೀಚೆಗೆ ಗಬ್ಬುನಾರುವ ವಾಸನೆ ಊರೆಲ್ಲ ಹಬ್ಬಿದೆ. ಅಲ್ಲಿನ ಕೃಷಿಕರು ತಮ್ಮ ಹೊಲಗಳಿಗೆ ಹೋಗುವುದಕ್ಕೆ ಮತ್ತು ನಿವಾಸದ ಮನೆಗಳಿಗೆ ಹೋಗಲು ಬಾಯಿ ಮತ್ತು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿಯಿಂದ ಜನರು ಹೈರಾಣಾಗಿದ್ದಾರೆ. ಈ ವಾಸನೆಯು ಏನಿರಬಹುದು ಎಂಬುದನ್ನು ಗ್ರಾಮಸ್ಥರು ಗಮನಿಸಿ ಸ್ಥಳಕ್ಕೆ ಹೋಗಿ ನೋಡಿದಾಗ, ಕೊಳೆತು ನಾರುತ್ತಿರುವ ದನ, ಎಮ್ಮೆಯ ಮೂಳೆಗಳು ಮತ್ತು ಅದರ ತೆಲಗಳ ದೃಶ್ಯ ನೋಡಿ ಗ್ರಾಮಸ್ಥರು ಆಶ್ಚರ್ಯಪಟ್ಟಿದ್ದಾರೆ. ಇದಾದ ಬಳಿಕ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಅದರಂತೆ ಪಿಡಿಒ ಅವರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿ ಕಳುಹಿಸಿದ್ದಾರೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭರ್ಜರಿ ಬಾಯ್ಸ ಯುವಕರ ತಂಡದವರು ಸ್ಥಳಕ್ಕೆ ಹೋಗಿ ವಿಡಿಯೋ ಮತ್ತು ೆಟೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಎಚ್ಚೆತ್ತ ಗೋದಾಮು ಮಾಲೀಕ ಲಿಂಗರಾಜು ಅವರು ಆ ಬಾಡಿಗೆಗೆ ಪಡೆದಿದ್ದ ವ್ಯಕ್ತಿಯನ್ನು ಖಾಲಿ ಮಾಡುವಂತೆಯೂ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಗ್ರಾಮಸ್ಥರಿಗೆ ಗಬ್ಬು ನಾರುತ್ತಿರುವ ವಾಸನೆಯ ಹಿಂಸೆಯಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ರೈತರು ಹಾಗೂ ವಾಸದ ಮನೆಗಳಿಗೆ ಹೋಗುವ ಜನರು ಮೂಗು ಮುಚ್ಚಿಕೊಂಡು ಕೆಟ್ಟ ವಾಸನೆ ಸಹಿಸಲಾರದೇ ಹೋಗುತ್ತಿದ್ದಾರೆ. ಗ್ರಾಮದೊಳಗಿರುವ ಆಲೆಮನೆಯಲ್ಲಿ ಪೌಡರ್ ಮಾಡಲಾಗುತ್ತಿತ್ತು ಎಂಬ ಆರೋಪವನ್ನು ಯುವಕರು ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಖಾಲಿ ಬಾಟಲಿ ಮತ್ತು ಹಳೆಯ ಪೇಪರ್ ಸಂಗ್ರಹಕ್ಕೆ ನಮಗೆ ಬಾಡಿಗೆ ಬೇಕು ಎಂಬುದನ್ನು ಬಾಡಿಗೆ ಪಡೆದ ವ್ಯಕ್ತಿಯು ಕೇಳಿಕೊಂಡರು. ಹಾಗಾಗಿ ಸಮ್ಮತಿಸಿದೆ. ಇನ್ನೂ ಕೂಡ ಲಿಖಿತ ಒಪ್ಪಂದ ಮಾಡಿಕೊಂಡಿಲ್ಲ. ಒಂದು ವಾರದಿಂದೀಚೆಗೆ ಬಾಯಿ ಮಾತಲ್ಲಿ ಮಾತನಾಡಲಾಗಿದೆ ಅಷ್ಟೇ?. ಗ್ರಾಮಸ್ಥರು ಹಿತದೃಷ್ಟಿಯಿಂದ ಅವರನ್ನು ಖಾಲಿ ಮಾಡುವಂತೆ ತಿಳಿಸಿದ್ದೇನೆ ಎಂದು ಗೋದಾಮು ಮಾಲೀಕ ಲಿಂಗರಾಜು ತಿಳಿಸಿದ್ದಾರೆ.

ದೂರಿನ ಬಳಿಕ ನೋಟಿಸ್: ತೂಬಿನಕೆರೆ ಗ್ರಾಮಸ್ಥರು ದೂರು ನೀಡಿದ ತಕ್ಷಣವೇ ಜಮೀನು ಮಾಲೀಕ ಲಿಂಗರಾಜು ಅವರಿಗೆ ನೋಟಿಸ್ ನೀಡಿದ್ದೇನೆ. ಜತೆಗೆ ತಕ್ಷಣವೇ ಖಾಲಿ ಮಾಡಿಸುವಂತೆಯೂ ಸೂಚಿಸಲಾಗಿದೆ. ಪರವಾನಗಿಯನ್ನು ತೆಗೆದುಕೊಂಡಿಲ್ಲದಿರುವುದು ಅಪರಾಧ. ತಕ್ಷಣವೇ ಖಾಲಿ ಮಾಡುತ್ತಾರೆ ಎಂದು ತೂಬಿನಕೆರೆ ಗ್ರಾಮ ಪಂಚಾಯಿತಿ ಪಿಡಿಒ ಸಿ.ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net