ಹೆದ್ದಾರಿಯಲ್ಲಿ ಬೀಡಾಡಿ ದನಗಳ ಹಾವಳಿ

02mdk06
Published on

ಮಡಿಕೇರಿ:

ಆನೆಕಾಡು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಬೀಡಾಡಿ ಜಾನುವಾರುಗಳ ಹಾವಳಿ ಶುರುವಾಗಿದೆ. ಬೆಳಗ್ಗೆ ಅಥವಾ ಸಂಜೆಯ ಮಬ್ಬುಗತ್ತಲಲ್ಲಿ ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯನ್ನು ಇಲ್ಲಿ ತಳ್ಳಿಹಾಕುವಂತಿಲ್ಲ. ಸ್ಥಳೀಯ ಆಡಳಿತಗಳ ಎಚ್ಚರಿಕೆ ಮಧ್ಯೆಯೂ ಪಶುಪಾಲಕರ ಬೇಜವಾಬ್ದಾರಿ ಮನುಷ್ಯರು ಮಾತ್ರವಲ್ಲದೆ ದನಕರುಗಳ ಪ್ರಾಣಕ್ಕೂ ಅಪಾಯ ತಂದೊಡ್ಡುತ್ತಿದೆ.

ರಾಷ್ಟ್ರೀಯ ಹೆದ್ದಾರಿ ೨೭೫ರ ಮಡಿಕೇರಿ- ಕುಶಾಲನಗರ ಮಧ್ಯೆ ಆನೆಕಾಡುವಿನಿಂದ ಕುಶಾಲನಗರ ತನಕ ಯಮಸ್ವರೂಪಿ ಬೀಡಾಡಿ ದನಗಳಿಂದ ಆಗಾಗ್ಗೆ ಅನಾಹುತ ಸಂಭವಿಸುತ್ತಲೇ ಇರುತ್ತದೆ. ಎಷ್ಟು ಎಚ್ಚರಿಕೆ ನೀಡಿದರೂ ಬಗ್ಗದ ಪಶುಪಾಲಕರು ತಮ್ಮ ಜಾನುವಾರುಗಳನ್ನು ಮತ್ತೆ ಮತ್ತೆ ರಸ್ತೆಗೆ ಅಟ್ಟುವ ಮೂಲಕ ಸಡ್ಡು ಹೊಡೆದು ನಿಂತಿದ್ದಾರೆ. ಆನೆಕಾಡು-ಗುಡ್ಡೆಹೊಸೂರು ಭಾಗದಲ್ಲಿ ದಿನಕ್ಕೆ ಕನಿಷ್ಠ ಒಂದು ಅಪಘಾತ ರಸ್ತೆ ಮಧ್ಯೆ ಓಡಾಡುವ ಬೀಡಾಡಿ ದನಗಳಿಂದಾಗಿ ಸಂಭವಿಸುತ್ತಿದೆ. ದ್ವಿಚಕ್ರ ವಾಹನ ಸವಾರರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅಂಗವೈಕಲ್ಯಕ್ಕೂ ಒಳಗಾಗಿ ನರಳುತ್ತಿದ್ದಾರೆ. ಕಾರು, ಬಸ್ ಮತ್ತಿತರ ವಾಹನಗಳ ಅಪಘಾತಕ್ಕೂ ಈ ಬೀಡಾಡಿ ದನಗಳು ಕಾರಣವಾಗಿವೆ.

ಎಷ್ಟೇ ಎಚ್ಚರಿಕೆಯಿಂದ ವಾಹನ ಚಲಾಯಿಸಿದರೂ ರಸ್ತೆಯಲ್ಲಿ ಸಾಲು ಸಾಲಾಗಿ ಸಂಚರಿಸುವ ಇಲ್ಲವೆ ರಸ್ತೆ ಮಧ್ಯೆಯೇ ಮಲಗಿರುವ ಜಾನುವಾರುಗಳು ಚಾಲಕರ ಚಾಲನಾ ಕೌಶಲ್ಯಕ್ಕೇ ಸವಾಲೆಸೆಯುವಂತೆ ಕಂಡುಬರುತ್ತದೆ. ಅಪಘಾತದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳೂ ಸತ್ತಿವೆ. ಕೈ,ಕಾಲು, ಬೆನ್ನುಮೂಳೆ ಮುರಿದುಕೊಂಡಿವೆ. ಸೋಮವಾರ (ಜು.೩೧) ಬೆಳಗ್ಗೆ ಇಲ್ಲಿ ವಾಹನ ಡಿಕ್ಕಿ ಹೊಡೆದು ೩ ಹಸುಗಳು ಮೃತಪಟ್ಟಿದ್ದು, ೨ ಹಸುಗಳು ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿವೆ. ೧೦ಕ್ಕೂ ಹೆಚ್ಚು ಜಾನುವಾರುಗಳು ಗಾಯಗೊಂಡಿದ್ದು ಮೂಕ ವೇದನೆ ಅನುಭವಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿ ಬದಿಯ ಬಸವನಹಳ್ಳಿ, ಗುಡ್ಡೆಹೊಸೂರು, ಮಾದಾಪಟ್ಟಣ, ಬೊಳ್ಳೂರು ಭಾಗದ ಪಶುಪಾಲಕರು ತಮ್ಮ ಜಾನುವಾರುಗಳನ್ನು ಮೇಯಲು ರಸ್ತೆಗೆ ಬಿಡುವುದೇ ಇಲ್ಲಿ ದುರ್ಘಟನೆಗಳು ನಡೆಯಲು ಪ್ರಮುಖ ಕಾರಣವಾಗಿದೆ. ನಾಕೂರು ಶಿರಂಗಾಲ, ಹೇರೂರು ಭಾಗದಿಂದಲೂ ಜಾನುವಾರುಗಳು ಕಾಡೊಳಗೆ ಮೇಯುತ್ತಾ ರಸ್ತೆ ಬರುತ್ತಿವೆ. ಮಳೆ ಮತ್ತು ಚಳಿ ಹೆಚ್ಚು ಇರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೆಚ್ಚನೆ ವಾತಾವರಣ ಇರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಕಾಣಿಸಿಕೊಳ್ಳುತ್ತದೆ. ಈ ವೇಳೆ ರಸ್ತೆ ಕೂಡ ಚಾಲಕರಿಗೆ ಅಸ್ಪಷ್ಟವಾಗಿ ಕಾಣಿಸುವುದರಿಂದ ಅಪಘಾತಗಳು ಕೂಡ ಹೆಚ್ಚು ಸಂಭವಿಸುತ್ತಿರುತ್ತದೆ.

ಬೇಜವಾಬ್ದಾರಿಯಿಂದ ವರ್ತಿಸುವ ಪಶುಪಾಲಕರು ಹಾಲು ಕರೆದು ಒಮ್ಮೆ ಹಸುಗಳನ್ನು ಮನೆಯಿಂದ ಹೊರಗಡೆ ಅಟ್ಟಿ ಮೇಯಲು ಬಿಟ್ಟರೆ ಮತ್ತೆ ಸಂಜೆ ಇನ್ನೊಮ್ಮೆ ಹಾಲು ಕರೆಯುವ ವೇಳೆಗೇ ಮನೆ ಕಡೆ ಕರೆದೊಯ್ಯಲಾಗುತ್ತದೆ. ಈ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಶುಪಾಲನೆಯನ್ನು ಉಪವತ್ತಿಯನ್ನಾಗಿ ಮಾಡುತ್ತಿದ್ದು, ಸಾಮಾನ್ಯವಾಗಿ ಉತ್ತಮ ತಳಿಯ ಹಸುಗಳನ್ನು ಮನೆಯಲ್ಲೇ ಪೋಷಣೆ ಮಾಡಿದರೆ, ಸಾಮಾನ್ಯ ನಾಟಿ ತಳಿ ಹಸು ಸಾಕಾಣಿಕೆ ಮಾಡುವವರ ಪೈಕಿ ಹೆಚ್ಚಿನವರು ನೇರವಾಗಿ ಹೊರಗೆ ಕಳುಹಿಸಿಬಿಡುತ್ತಾರೆ.

ಬೀಡಾಡಿ ದನಗಳಿಂದಾಗಿ ಇಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಕಾರಣ ಸಂಚಾರಿ ಪೊಲೀಸರು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಹೆದ್ದಾರಿಯಲ್ಲಿ ಜಾನುವಾರುಗಳನ್ನು ಬಿಡುವ ಪಶುಪಾಲಕರಿಗೆ ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದ್ದಾರೆ. ಗುಡ್ಡೆಹೊಸೂರು, ನಾಕೂರು ಗ್ರಾಮ ಪಂಚಾಯಿತಿ ಕಡೆಯಿಂದಲೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ ಹಲವು ಬಾರಿ ಇಲ್ಲಿ ಕಂಡುಬರುವ ದನಗಳನ್ನು ಪಂಚಾಯಿತಿ ವತಿಯಿಂದ ಸೆರೆಹಿಡಿದು, ಮಾಲೀಕರಿಗೆ ದಂಡವನ್ನೂ ವಿಧಿಸಲಾಗಿದೆ. ಆದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.

ಬೆಳಗ್ಗೆ ಮತ್ತು ಸಂಜೆ ಸುಮಾರು ಇನ್ನೂರಕ್ಕೂ ಅಧಿಕ ಜಾನುಮಾರುಗಳು ಈ ಭಾಗದಲ್ಲಿ ಕಂಡು ಬರುತ್ತದೆ. ಈ ಹಿಂದಿನ ವರ್ಷಗಳಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ವತಿಯಿಂದ ಬಿಸಿ ಮುಟ್ಟಿಸಿದ ನಂತರ ಸ್ಥಳೀಯ ಪಶುಪಾಲಕರು ಸ್ವಲ್ಪ ಮಟ್ಟಿಗೆ ತಮ್ಮ ಜಾನುವಾರುಗಳ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿದ್ದರೂ, ಪೂರ್ಣ ಬದಲಾಗಬೇಕಿದೆ. ಪಕ್ಕದ ನಾಕೂರು ಶಿರಂಗಾಲ ಗ್ರಾ.ಪಂ. ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಕಾಡಿಗೆ ಅಟ್ಟುವ ದನಗಳು ಕೂಡ ಆನೆಕಾಡು ಹೆದ್ದಾರಿಯಲ್ಲಿ ಸಮಸ್ಯೆಯಾಗಿ ಕಾಡುತ್ತಿದೆ.

ಆನೆಕಾಡು ಹೆದ್ದಾರಿಯಲ್ಲಿ ಬೀಡಾಡಿ ದನಗಳಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸುವುದು ಪ್ರತಿನಿತ್ಯ ಸಾಮಾನ್ಯ ವಿಷಯ ಎನ್ನುವಂತೆ ಆಗಿಬಿಟ್ಟಿದೆ. ವಾರಾಂತ್ಯದ ದಿನಗಳಲ್ಲಿ ಪ್ರವಾಸಿ ವಾಹನಗಳು ಹೆಚ್ಚು ಇರುವ ಸಂದರ್ಭ ಈ ಸಂಖ್ಯೆ ಇನ್ನೂ ಜಾಸ್ತಿ ಇರುತ್ತದೆ. ಅಪಘಾತದಲ್ಲಿ ಜಾನುವಾರುಗಳು ಮೃತಪಟ್ಟ ಸಂದರ್ಭ ಅದರ ಮಾಲೀಕರು ಬರುವುದೇ ಇಲ್ಲ. ಗಾಯಗೊಂಡು ನರಳುವಾಗಲೂ ಸ್ಥಳೀಯ ಪಂಚಾಯಿತಿ ಸಿಬ್ಬಂದಿಯೇ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಬೇಕು. ಮತಪಡುವ ಜಾನುವಾರುಗಳನ್ನು ಮಣ್ಣು ಮಾಡಲು ಗುಡ್ಡೆಹೊಸೂರು ಪಂಚಾಯಿತಿ ವಾರಕ್ಕೆ ೩-೪ ಸಾವಿರ ರೂ. ತೆಗೆದಿಡಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

ಗುಡ್ಡೆಹೊಸೂರು ಗ್ರಾ.ಪಂ. ವತಿಯಿಂದ ೨ ವರ್ಷದ ಹಿಂದೆ ಆನೆ ಕಾಡು ಭಾಗದಲ್ಲಿ ಬೀಡಾಡಿ ದನಗಳನ್ನು ಹಿಡಿಯುವ ಕಾಯಾಚರಣೆ ನಡೆಸಲಾಗಿತ್ತು. ಸಂದರ್ಭದಲ್ಲಿ ಜಾನುವಾರು ಮಾಲೀಕರು ಪಂಚಾಯಿತಿ ಸಿಬ್ಬಂದಿಗೆ ಬೆದರಿಕೆ ಒಡ್ಡಿದ್ದರು. ತಮ್ಮ ಜಾನುವಾರುಗಳನ್ನು ಹಿಡಿಯದಂತೆ ಗದರಿಸಿದ್ದರು. ಈ ವಿಷಯ ಪೊಲಿಸ್ ಠಾಣೆ ಮೆಟ್ಟಿಲು ಕೂಡ ಹತ್ತಿತ್ತು. ಇದೀಗ ಪಂಚಾಯಿತಿ ವತಿಯಿಂದ ಪಶುಪಾಲಕರಿಗೆ ಮತ್ತೆ ನೊಟೀಸ್ ನೀಡಲಾಗುತ್ತಿದೆ. ಮನೆಯಲ್ಲಿ ಕಟ್ಟಿ ಹಾಕಿ ಹಸುಗಳನ್ನು ಸಾಕುವಂತೆ ಸೂಚನೆ ಕೊಡಲಾಗುತ್ತಿದೆ. ಬೀಡಾಡಿ ದನಗಳ ಕಾರಣದಿಂದ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ಅದರ ಮಾಲೀಕರೇ ಹೊಣೆಗಾರರಾಗಬೇಕಾಗುತ್ತದೆ. ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಅನೆಕಾಡು ಭಾಗದ ನಿವಾಸಿಗಳು ತಮ್ಮ ಹಸುಗಳನ್ನು ಮೇಯಲು ಬಿಟ್ಟು ನಂತರ ಅದರತ್ತ ಗಮನ ಹರಿಸುವುದಿಲ್ಲ. ಇತ್ತೀಚೆಗೆ ರಾತ್ರಿ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಪಡಿಸಿ ೨ ಹಸುಗಳು ತೀವ್ರವಾಗಿ ಗಾಯಗೊಂಡಿರುವ ವಿಚಾರ ತಿಳಿದಿದ್ದರೂ ಅದರ ಮಾಲೀಕರು ಬಾರದೆ ಬೇಜವಾಬ್ದಾರಿ ತೋರಿಸಿದ್ದಾರೆ. ಅ ಮಾಲೀಕರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಎಫ್ ಐ ಆರ್ ಮಾಡಿಸುವ ಅವಕಾಶವಿದ್ದರೆ ಮಾಡಿಸುತ್ತೇವೆ. ಇಲ್ಲವಾದರೆ ನ್ಯಾಯಾಲಯದಲ್ಲಿ ದಂಡ ಕಟ್ಟಿಸುವ ಹಾಗೆ ಮಾಡುತ್ತೇವೆ.
ಆರ್.ವಿ. ಗಂಗಾಧರಪ್ಪ, ಡಿವೈಎಸ್ಪಿ, ಕುಶಾಲನಗರ

ಪಶುಪಾಲಕರ ವರ್ತನೆ ಬೇಸರ ತರುತ್ತದೆ. ತಾವು ಸಾಕಿದ ಜಾನುವಾರುಗಳನ್ನು ರಸ್ತೆಗೆ ಅಟ್ಟಿದ ನಂತರ ತಿರುಗಿಯೂ ನೋಡುವುದಿಲ್ಲ. ಒಂದು ವೇಳೆ ಅಪಘಾತ ನಡೆದು ಸತ್ತುಹೋದರೆ ಕಳೆಬರವನ್ನೂ ತೆಗೆದುಕೊಂಡು ಹೋಗುವುದಿಲ್ಲ. ಹಸುಗಳು ಗಾಯಗಳಾದರೆ ಚಿಕಿತ್ಸೆ ಕೊಡಿಸುವ ಮಾನವೀಯತೆಯನ್ನೂ ತೋರಿಸುವುದಿಲ್ಲ.
ವಿಜಯ್ ವಿ.ಆರ್. ಗುಡ್ಡೆಹೊಸೂರು ಗ್ರಾ.ಪಂ. ಸಿಬ್ಬಂದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net