ಅಮೃತ್ ಕಾಟ್ಲಾ ನಿರೀಕ್ಷೆ ಅಪಾರ

catla
Published on

ಮಡಿಕೇರಿ:

ಪ್ರೊಟೀನ್ ಮತ್ತು ಉತ್ತಮ ಪೋಷಕಾಂಶಗಳ ಆಹಾರವಾಗಿ ಮೀನು ಬಳಕೆಯಲ್ಲಿದೆ. ಮತ್ಸೊö್ಯÃದ್ಯಮ ದೊಡ್ಡಮಟ್ಟದ ಆರ್ಥಿಕ ಚಟುವಟಿಕೆಯೂ ಹೌದು. ಸಿಹಿನೀರಿನ ಮೀನುಗಾರಿಕೆ ಒಳನಾಡಿನಲ್ಲಿ ಬಹುತೇಕರಿಗೆ ಬದುಕು ಕಟ್ಟಿಕೊಟ್ಟಿದೆ. ಒಳನಾಡಿನ ಮೀನುಗಾರಿಕೆಯಲ್ಲಿ ಕಾಟ್ಲಾ ಮೀನು ಸಾಕಾಣಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಮಧ್ಯೆ ಐಸಿಎಆರ್-ಸಿಐಎಫ್‌ಎ ಅಭಿವೃದ್ಧಿಪಡಿಸಿರುವ ನೂತನ ತಳಿ 'ಅಮೃತ್ ಕಾಟ್ಲಾ' ಮೀನು ಕೃಷಿಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.

ವೈಜ್ಞಾನಿಕವಾಗಿ ಮೀನು ಕೃಷಿ ಮಾಡಿದರೆ ಚಿಕ್ಕ ಜಾಗದಲ್ಲೂ ಉತ್ತಮ ಆದಾಯ ಪಡೆಯಬಹುದು ಎನ್ನುತ್ತಾರೆ ತಜ್ಞರು. ಕೆರೆ, ತೋಟದ ಚಿಕ್ಕ ಚಿಕ್ಕ ಕೊಳಗಳು, ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡಿಕೊಂಡು ಬಹುತೇಕ ಕೃಷಿಕರು ತಮ್ಮ ಪ್ರಧಾನ ಕೃಷಿ ಜತೆಗೆ ಒಳ್ಳೆಯ ಸಂಪಾದನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಕೆಲವರು ಮೀನು ಸಾಕಾಣಿಕೆಯನ್ನೇ ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಕೃಷಿಯನ್ನು ಉಪ ಕಸುಬು ಮಾಡಿಕೊಂಡು ಯಶಸ್ವಿಯಾದವರೂ ಅಲ್ಲಲ್ಲಿ ಇದ್ದಾರೆ.

ಒಳನಾಡಿನ ಮೀನು ಸಾಕಾಣಿಕೆಯಲ್ಲಿ ಸಾಮಾನ್ಯವಾಗಿ ಒಂದೇ ಕಡೆ ವಿವಿಧ ಜಾತಿಯ ಮೀನುಗಳನ್ನು ಬೆಳೆಸಲಾಗುತ್ತದೆ. ಕೆಲವು ಮೀನುಗಳು ನೀರಿನ ಮೇಲ್ಭಾಗದಲ್ಲಿದ್ದುಕೊಂಡು ಬದುಕಿದರೆ, ಮತ್ತೆ ಕೆಲವು ನೀರಿನ ಮಧ್ಯಭಾಗದಲ್ಲಿ ಇರುತ್ತದೆ, ಇನ್ನು ಕೆಲವು ತಳಭಾಗದಲ್ಲಿ ಬೆಳೆಯುತ್ತವೆ. ಇಂಥ ಮೀನುಗಳಲ್ಲಿ ಕಾಟ್ಲಾ ಮೀನು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಅಲ್ಪಾವಧಿಯಲ್ಲಿ ಶೀಘ್ರವಾಗಿ ಬೆಳೆದು ಕೃಷಿಕರಿಗೆ ಲಾಭ ತರುವ ಮೀನಾಗಿ ಕಾಟ್ಲಾ ಮೀನು ಗುರುತಿಸಿಕೊಂಡಿದೆ.

ಸಾಮಾನ್ಯವಾಗಿ ಸ್ಥಳೀಯ ತಳಿಯ ಕಾಟ್ಲಾಗಳು ಎಲ್ಲಾ ರೀತಿಯ ಪೂರಕ ವಾತಾವರಣದಲ್ಲಿ ವರ್ಷಕ್ಕೆ ಸುಮಾರು 1.2 ಕೆಜಿ ತೂಕ ಬೆಳೆಯುತ್ತದೆ. ಆದರೆ ಭುವನೇಶ್ವರದಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್ (ಐಸಿಎಆರ್)-ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫ್ರೆಶ್‌ವಾಟರ್ ಅಕ್ವಾಕಲ್ಚರ್ (ಸಿಐಎಫ್‌ಎ) ಅಭಿವೃದ್ಧಿಪಡಿಸಿರುವ 'ಅಮೃತ್ ಕಾಟ್ಲಾ' ಇದಕ್ಕಿಂತಲೂ ಉತ್ತಮ ವೇಗದಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿದ್ದು ಮೀನು ಕೃಷಿಕರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಕಳೆದ ವರ್ಷ ಸೆ.12ಕ್ಕೆ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಬಿಡುಗಡೆ ಮಾಡಿರುವ 'ಅಮೃತ್ ಕಾಟ್ಲಾ' ಮೀನು 2024ರ ಆಗಸ್ಟ್ 1ರಂದೇ 'ಸಿಐಎಫ್‌ಎ ಅಮೃತ್ ಕಾಟ್ಲಾ' ಎಂದು ಅಧಿಕೃತ ಟ್ರೇಡ್ ಮಾರ್ಕ್ ಪಡೆದುಕೊಂಡಿದೆ. ಈ ಹೊಸ ತಳಿಯನ್ನು ದೇಶಾದ್ಯಂತ ಮೀನು ಕೃಷಿಕರಿಗೆ ವಿತರಿಸಲು ರಾಷ್ಟಿçÃಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ(ಎನ್‌ಎಫ್‌ಡಿಬಿ) ಅಡಿಯಲ್ಲಿ ರಾಷ್ಟ್ರೀಯ ಫ್ರೆಶ್‌ವಾಟರ್ ಫಿಶ್ ಬ್ರೂಡ್ ಬ್ಯಾಂಕ್ (ಎನ್‌ಎಫ್‌ಎಫ್‌ಬಿಬಿ) ಗೆ ವರ್ಗಾಯಿಸಲಾಗಿದೆ. ಸದ್ಯದಲ್ಲೇ ಈ ತಳಿ ಮೀನು ಕೃಷಿಕರಿಗೆ ಲಭ್ಯವಾಗಲಿದೆ.

ಒಳನಾಡಿನ ಮೀನುಗಾರಿಕೆಯಲ್ಲಿ ಕ್ರಾಂತಿಯ ನಿರೀಕ್ಷೆ ಹುಟ್ಟುಹಾಕಿರುವ 'ಅಮೃತ್ ಕಾಟ್ಲಾ' ಅನುವಂಶಿಕವಾಗಿ ಅಭಿವೃದ್ಧಿಪಡಿಸಲಾಗಿರುವ ಮೀನು ತಳಿಯಾಗಿದೆ. ಇದಕ್ಕಾಗಿ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಆಂಧ್ರಪ್ರದೇಶ ಹಾಗೂ ಉತ್ತರ ಪ್ರದೇಶದ ಕಾಟ್ಲಾ ತಳಿಗಳನ್ನು ಬಳಸಿಕೊಳ್ಳಲಾಗಿದೆ. ಕಟಾವಿನ ಸಂದರ್ಭದಲ್ಲಿ ಮೀನಿನ ವೇಗದ ಬೆಳವಣಿಗೆ ಕೇಂದ್ರೀಕೃತವಾಗಿ 2010ರಿಂದಲೇ ಐಸಿಎಆರ್-ಸಿಐಎಫ್‌ಎ ನಡೆಸಿಕೊಂಡು ಬರುತ್ತಿದ್ದ ಸಂಶೋಧನೆಗಳ ಫಲವಾಗಿ 'ಅಮೃತ್ ಕಾಟ್ಲಾ' ತಳಿ ರೂಪುಗೊಂಡಿದೆ.

ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ನಡೆಸಿದ ಕ್ಷೇತ್ರ ಪ್ರಯೋಗಗಳಲ್ಲಿ ಈ ತಳಿಯ ಅತ್ಯುತ್ತಮ ಬೆಳವಣಿಗೆಯ ಕಾರ್ಯಕ್ಷಮತೆ ದಾಖಲಾಗಿದೆ. ಪಾಲಿಕಲ್ಚರ್ ವ್ಯವಸ್ಥೆಗಳಲ್ಲಿ 'ಅಮೃತ್ ಕಾಟ್ಲಾ' ಮೀನು ಒಂದು ವರ್ಷದಲ್ಲಿ ಸರಾಸರಿ 1.8 ಕೆಜಿ ತೂಕ ಗಳಿಸಿರುವುದು ಕಂಡು ಬಂದಿದೆ. ಸಾಮಾನ್ಯ ತಳಿಯ ಕಾಟ್ಲಾ ಮೀನು ಒಂದು ವರ್ಷದಲ್ಲಿ 1.2 ಕೆ.ಜಿ. ಬೆಳವಣಿಗೆ ಸಾಧಿಸಿದರೆ, 'ಅಮೃತ್ ಕಾಟ್ಲಾ' ಶೇ. 35ರಷ್ಟು ಹೆಚ್ಚಿನ ತೂಕ ಪಡೆದುಕೊಳ್ಳುವುದು ಸಾಬೀತಾಗಿದೆ. ಹಾಗಾಗಿಯೇ ಈ ಮೀನು ತಳಿಯ ಅಭಿವೃದ್ಧಿಗೆ 96ನೇ ಐಸಿಎಆರ್ ಫೌಂಡೇಶನ್ ಮತ್ತು ತಂತ್ರಜ್ಞಾನ ದಿನದಂದು ಅತ್ಯುತ್ತಮ ತಂತ್ರಜ್ಞಾನ ಪ್ರಶಸ್ತಿಯೂ ಬಂದಿದೆ.

ಅಲ್ಪಾವಧಿಯಲ್ಲಿ ಅತ್ಯಂತ ವೇಗದ ಬೆಳವಣಿಗೆ ಮೂಲಕ ಗಮನ ಸೆಳೆದಿರುವ 'ಅಮೃತ್ ಕಾಟ್ಲಾ' ತಳಿಯ ಮೀನಿನ ಬಿತ್ತನೆ ಮರಿಗಳು ಸ್ಥಳೀಯ ಕೃಷಿಕರಿಗೆ ಇನ್ನಷ್ಟೇ ಲಭ್ಯವಾಗಬೇಕಿದೆ. ಸದ್ಯಕ್ಕೆ ಹೊರ ರಾಜ್ಯಗಳಲ್ಲಿ ಇದನ್ನು ಪರಿಚಯಿಸುವ ಕೆಲಸ ಆಗುತ್ತಿದೆ. ಹಂತ ಹಂತವಾಗಿ ಕರ್ನಾಟಕ್ಕೂ ಬಿತ್ತನೆ ಮರಿಗಳು ಲಭ್ಯವಾಗಲಿದೆ. ಇಲ್ಲಿ ಅವುಗಳನ್ನು ಬಳಸಿಕೊಂಡು ಸ್ಥಳೀಯ ಮೀನು ಮರಿ ಉತ್ಪಾದನಾ ಕೇಂದ್ರಗಳಲ್ಲಿ ಮರಿಗಳ ಉತ್ಪಾದನೆ ಹೆಚ್ಚಿಸಿ ಆದಷ್ಟು ಶೀಘ್ರ ಇಲ್ಲಿನ ಮೀನು ಕೃಷಿಕರಿಗೆ ತಲುಪಿಸಲು ಮೀನುಗಾರಿಕೆ ಇಲಾಖೆಯೂ ಉತ್ಸುಕವಾಗಿದೆ.

ಐಸಿಎಆರ್-ಸಿಐಎಫ್‌ಎ ಅಭಿವೃದ್ಧಿಪಡಿಸಿರುವ ನೂತನ ತಳಿ 'ಅಮೃತ್ ಕಾಟ್ಲಾ' ಮೀನೀನ ಕೃಷಿ ಖಂಡಿತವಾಗಿಯೂ ಮೀನು ಕೃಷಿಕರಿಗೆ ಉತ್ತಮ ಲಾಭ ತಂದುಕೊಡಲಿದೆ. ಬೇರೆ ರಾಜ್ಯಗಳಲ್ಲಿ ಈಗಾಗಲೇ ಈ ಮೀನು ಬೆಳೆಯಲಾಗುತ್ತಿದೆ. ಈಗಷ್ಟೇ ಅಭಿವೃದ್ಧಿಪಡಿಸಿರುವ ತಳಿ ಆಗಿರುವುದರಿಂದ ಬೇಡಿಕೆಯಷ್ಟು ಮೀನು ಮರಿಗಳು ಸಿಗುತ್ತಿಲ್ಲ. ಹಾಗಾಗಿ ಕರ್ನಾಟಕಕ್ಕೆ ಇನ್ನೂ ತಲುಪಿಲ್ಲ. ಮುಂದಿನ ದಿನಗಳಲ್ಲಿ ನಮ್ಮಲ್ಲಿಗೂ ಬರಲಿದೆ. ಇಲ್ಲೂ ಅವುಗಳ ಮರಿ ಉತ್ಪಾದನೆ ಪ್ರಕ್ರಿಯೆ ಶುರುವಾದ ನಂತರ ಮೀನು ಕೃಷಿಕರಿಗೆ ಲಭ್ಯವಾಗಲಿದೆ.

ಸಚಿನ್, ಉಪನಿರ್ದೇಶಕ, ಮೀನುಗಾರಿಕೆ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net