ಹೊಸಕೋಟೆಯಲ್ಲಿ ಬೇರುಬಿಟ್ಟ ಕ್ಯಾಟ್‌ಫಿಶ್ ದಂಧೆ!

cat
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹೊಸಕೋಟೆ ತಾಲೂಕಿನಲ್ಲಿ ಸದ್ದಡಗಿದ್ದ ನಿಷೇಧಿತ ಕ್ಯಾಟ್‌ಫಿಶ್ ದಂಧೆ ಮತ್ತೆ ಸದ್ದು ಮಾಡಲಾರಂಭಿಸಿದ್ದು ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿ ಭಾಗಗಳಲ್ಲಿ ಗಬ್ಬುವಾಸನೆ ಮೂಗಿಗೆ ರಾಚಲಾರಂಭಿಸಿದೆ. ಸ್ಥಳೀಯ ಪ್ರಭಾವಿಗಳ ಬೆಂಬಲದಿಂದ ಈ ದಂಧೆ ನಡೆಯುತ್ತಿದ್ದು, ಅಧಿಕಾರಿಗಳೂ ಕೈಕಟ್ಟಿ ಕೂರುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಯ ಬೈಲನರಸಾಪುರ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ಯಾಟ್‌ಫಿಶ್ ದಂಧೆ ಆರಂಭವಾಗಿದೆ. ಆಗಾಗ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಮೀನುಸಾಕಣೆ ಹೊಂಡಗಳನ್ನು ನಾಶಪಡಿಸುವ ಪ್ರಹಸನ ನಡೆಸಿದರೂ ಕೆಲವು ತಿಂಗಳ ಬಳಿಕ ಮತ್ತೆ ಆರಂಭವಾಗುತ್ತದೆ. ಕಳೆದೆರಡು ವರ್ಷದಿಂದ ನೇಪಥ್ಯಕ್ಕೆ ಸರಿದಂತಿದ್ದ ದಂಧೆ ಮತ್ತೆ ಚಿಗಿತುಕೊಂಡಿದೆ. ಜಿಲ್ಲಾಡಳಿತದ ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗದಿದ್ದರೆ ಈ ಭಾಗದ ಕೃಷಿ ಭೂಮಿಗಳು ಕ್ಯಾಟ್‌ಫಿಶ್ ಸಾಕಾಣಿಕೆ ಕೇಂದ್ರಗಳಾಗಿ ರೂಪುಪಡೆಯಲಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬಾಡಿಗೆ ಪಡೆಯುತ್ತಾರೆ: ರೈತರ ಸೋಗಿನಲ್ಲಿ ಹೆಜ್ಜೆ ಹಾಕುವ ದಂಧೆಕೋರರು ನಿಷೇಧಿತ ಕ್ಯಾಟ್‌ಫಿಶ್ ಸಾಕಣೆಗೆ ರೈತರ ಜಮೀನುಗಳನ್ನು ಬಾಡಿಗೆ ಪಡೆಯುತ್ತಾರೆ. ಕೇವಲ ಮೀನುಸಾಕಣೆ ಎಂದು ಹೇಳುತ್ತಾರೆ ಹೊರತು ಇದು ನಿಷೇಧಿತ ಎಂಬುದರ ಬಗ್ಗೆ ಎಲ್ಲಿಯೂ ಬಾಯಿ ಬಿಡುವುದಿಲ್ಲ. ಇಲ್ಲಿನ ರೈತಾಪಿ ಜನರಿಗೂ ಇದರ ಬಗ್ಗೆ ಅರಿವಿಲ್ಲ ಎನ್ನಲಾಗಿದೆ. ಹೊಸಕೋಟೆ ಹೊರವಲಯ ಅಥವಾ ಬೆಂಗಳೂರಿನಲ್ಲಿ ವಾಸವಿರುವ ಜಮೀನು ಮಾಲೀಕರನ್ನೇ ಗುರಿಯಾಗಿಟ್ಟುಕೊಂಡು ಜಮೀನು ಬಾಡಿಗೆಗೆ ಪಡೆಯುವ ದಂಧೆಕೋರರು 5 ರಿಂದ 10 ಗುಂಟೆ ಜಾಗಕ್ಕೆ ಪ್ರತಿ ತಿಂಗಳು 30 ರಿಂದ 40 ಸಾವಿರ ರೂಪಾಯಿ ಬಾಡಿಗೆ ನೀಡುತ್ತಾರೆ. ಈ ದಂಧೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಮಾಲೀಕರು ಹಣದಾಸೆಗೆ ಜಮೀನುಗಳನ್ನು ಬಾಡಿಗೆ ಕೊಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಬೈಲನರಸಾಪುರದಲ್ಲಿ ಹೆಚ್ಚು: ಹೊಸಕೋಟೆ ತಾಲೂಕಿನ ಗಡಿಯಂಚಿನ ಗ್ರಾಮಗಳ ಜಮೀನುಗಳಲ್ಲಿ ಈ ದಂಧೆ ಬೇರುಬಿಡುತ್ತಿದೆ. ಸೂಲಿಬೆಲೆ, ನಂದಗುಡಿಯಲ್ಲಿ ಅತಿ ಹೆಚ್ಚು ಕ್ಯಾಟ್‌ಫಿಶ್ ಸಾಕಾಣೆ ನಡೆಯುತ್ತಿದೆ. ಅದರಲ್ಲೂ ಬೈಲ ನರಸಾಪುರ ಭಾಗದಲ್ಲಿ 20 ಕ್ಕೂ ಹೆಚ್ಚು ಕ್ಯಾಟ್‌ಫಿಶ್ ಸಾಕಣೆ ಹೊಂಡಗಳಿವೆ. ಸೂಲಿಬೆಲೆಯಲ್ಲಿ ನಾಲ್ಕೈದು ಹೊಂಡಗಳಲ್ಲಿ ದಂಧೆ ಆರಂಭವಾಗಿದೆ.

ಕೃಷಿಭೂಮಿಯಲ್ಲಿ ಕಾನೂನು ಬಾಹಿರ ಚಟುವಟಿಕೆ: ಹೊಸಕೋಟೆ ತಾಲೂಕಿನ ಕೃಷಿಭೂಮಿ ಕಾನೂನುಬಾಹಿರ ಚಟುವಟಕೆಗಳಿಗೆ ಬಳಕೆಯಾಗುತ್ತಿದೆ. ಮುಖ್ಯವಾಗಿ ಮಾವು, ನೀಲಗಿರಿ ತೋಪುಗಳು ಕ್ಯಾಟ್‌ಪಿಶ್‌ಹೊಂಡಗಳಾಗಿ ಪರಿವರ್ತನೆಯಾಗುತ್ತಿವೆ. ಈ ದಂಧೆ ನಡೆಯುವ ಸುತ್ತಮುತ್ತಲಿನ ಜಮೀನಿನಲ್ಲಿ ಯಾವುದೇ ಸಲು ಕಾಣಲು ಸಾಧ್ಯವಿಲ್ಲ. ಕ್ಯಾಟ್‌ಪಿಶ್ ಭಕ್ಷಣೆಗೆ ಮುಗಿಬೀಳುವ ಹದ್ದು, ಗಿಡುಗ, ಕಾಗೆಯಂಥ ಪಕ್ಷಿಗಳು ಇತರ ಬೆಳೆಗಳಿಗೂ ಲಗ್ಗೆಹಾಕುತ್ತವೆ.

ಎಲ್ಲಿಂದ ಎಲ್ಲಿಗೆ ದಂಧೆ: ಪಶ್ಚಿಮ ಬಂಗಾಳದಿಂದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹಾಗೂ ಆಂಧ್ರ ಪ್ರದೇಶದಿಂದ ರಸ್ತೆ ಮಾರ್ಗದ ಮೂಲಕ ಜಿಲ್ಲೆಗೆ ಕ್ಯಾಟ್‌ಪಿಶ್ ಮರಿಗಳು ರವಾನೆಯಾಗುತ್ತಿವೆ ಎಂದು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇಲ್ಲಿ ಬೆಳೆದ ಮೀನುಗಳು ಕಲ್ಕತ್ತಾ ಸೇರಿ ಉತ್ತರ ಪ್ರದೇಶ, ಅಹಮದಬಾದ್, ಮಹಾರಾಷ್ಟ್ರದ ಭಾಗಗಳಿಗೆ ಸಾಗಣೆಯಾಗುತ್ತದೆ ಎನ್ನಲಾಗಿದೆ. ಸ್ಥಳೀಯವಾಗಿ ಹೋಟೆಲ್, ಡಾಬಗಳಲ್ಲೂ ವಿವಿಧ ಹೆಸರಿನಲ್ಲಿ ಬಿಕರಿಯಾಗುತ್ತಿದೆ. ಆದರೆ ಹೊರಗಡೆ ರವಾನೆಯಾಗುವ ಪ್ರಮಾಣ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 ತಿಂಗಳ ಹಿಂದೆ ಕ್ಯಾಟ್‌ಫಿಶ್ ಸಾಕಾಣಿಕೆ ಮಾಡುತಿದ್ದ ಹೊಂಡಗಳನ್ನು ದ್ವಂಸ ಮಾಡಲಾಗಿದೆ. ಈ ಕಾರ್ಯಾಚರಣೆಗೆ ಜಿಲ್ಲಾ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ನಿರ್ಮಿಸಲಾಗಿದ್ದು, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಸಮಿತಿ ಸದಸ್ಯರಾಗಿರುತ್ತಾರೆ. ಹೊಸಕೋಟೆ ಭಾಗದಲ್ಲಿ ನಡೆಯುತ್ತಿರುವ ಈ ಕ್ಯಾಟ್‌ಫಿಶ್ ಸಾಕಾಣಿಕೆ ದಂಧೆಗೆ ಸಂಬಂಧಿಸಿದಂತೆ ಜಿಲ್ಲಾ ಉಪವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಆದೇಶದ ನಿರೀಕ್ಷೆಯಲ್ಲಿದ್ದೇವೆ.

ಸುಬ್ರಹ್ಮಣಿ, ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ ಬೆಂ.ಗ್ರಾಮಾಂತರ

ಸೂಲಿಬೆಲೆ ಹಾಗೂ ಬೈಲನರಸಾಪುರ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕ್ಯಾಟ್‌ಫಿಶ್ ಹೊಂಡಗಳಿಗೆ ಸತ್ತ ಬೀದಿ ನಾಯಿ, ಹಂದಿ, ಹಸು, ಕಸಾಯಿಖಾನೆ ತ್ಯಾಜ್ಯ, ಕೊಳೆತ ಮಾಂಸ ಹಾಕುವುದರಿಂದ ಅಕ್ಕಪಕ್ಕದ ಪ್ರದೇಶದಲ್ಲಿ ದುರ್ವಾಸನೆ ತುಂಬಿ ಗಬ್ಬು ನಾರುತ್ತಿದೆ. ಅಕ್ಕಪಕ್ಕದ ಜಮೀನಿನವರು ಕೃಷಿ ಚಟುವಟಿಕೆ ನಡೆಸುವುದೇ ದುಸ್ತರ ಎನ್ನುವಂತಾಗಿದೆ. ಈ ಬಗ್ಗೆ ಧ್ವನಿ ಎತ್ತಿದರೆ ಬೆದರಿಕೆ ಹಾಕುತ್ತಾರೆ. ಇವರಿಗೆ ಸ್ಥಳೀಯರ ಪ್ರಭಾವಿಗಳ ಬೆಂಬಲ ಇರಬಹುದು ಎನಿಸುತ್ತದೆ.

ಹೆಸರು ಹೇಳಲು ಇಚ್ಛಿಸದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net