

ಉಡುಪಿ: ಸಾಲುಸಾಲು ಮದುವೆ, ಉಪನಯನ, ಬ್ರಹ್ಮಕಲಶ, ಜಾತ್ರೆ ಎಂದು ಕ್ಯಾಟರಿಂಗ್, ಶಾಮಿಯಾನ, ಫೋಟೋಗ್ರಾಫರ್ಸ್ ಮೊದಲಾದವರಿಗೆ ಒಂದಷ್ಟು ವ್ಯವಹಾರ ಕುದುರಲಾರಂಭಿಸುತ್ತಿದ್ದಾಗಲೇ ಕರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುಢತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಬರಸಿಡಿಲಿನಂತೆ ಬಂದೆರಗಿದೆ.
ಕಳೆದ ವರ್ಷ ಏಪ್ರಿಲ್, ಮೇ ತಿಂಗಳು ಪೂರ್ತಿ ಲಾಕ್‌ಡೌನ್‌ನಿಂದ ಸ್ತಬ್ಧವಾಗಿದ್ದ ಶಾಮಿಯಾನ, ಕ್ಯಾಟರಿಂಗ್ ವಹಿವಾಟು ಈ ಬಾರಿ ಸರ್ಕಾರದ ಮಾರ್ಗಸೂಚಿ, ವಾರಾಂತ್ಯ ಕರ್ಫ್ಯೂನಿಂದ ಮತ್ತೆ ಸಂಕಷ್ಟಕ್ಕೆ ಒಳಗಾಗಿದೆ. ಸಭೆ, ಸಮಾರಂಭಗಳಿಗೆ ನಿರ್ಬಂಧ ಹೇರಿದ ಕಾರಣ ಪೂರ್ವ ನಿಗದಿತ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ. ಏಪ್ರಿಲ್ ಅಂತ್ಯ, ಮೇ ಮೊದಲ ವಾರ ಬಹಳಷ್ಟು ಮದುವೆ, ದೇವಾಲಯಗಳಲ್ಲಿ ವರ್ಷಾವಧಿ ಜಾತ್ರೆ, ಉತ್ಸವಗಳು ನಡೆಲಿದ್ದವು. ಉಪನಯನ, ಗೃಹಪ್ರವೇಶ, ವಿವಾಹ ನಿಶ್ಚಿತಾರ್ಥ ಮೊದಲಾದ ಕಾರ್ಯಕ್ರಮಗಳೂ ನಿಗದಿಯಾಗಿದ್ದವು. ಪ್ರಸಕ್ತ ಕೋವಿಡ್ ಮಾರ್ಗಸೂಚಿಯಿಂದ ಕೆಲವೊಂದು ಕಾರ್ಯಕ್ರಮಗಳು ಮುಂದೂಡಲ್ಪಟ್ಟರೆ, ಇನ್ನು ಕೆಲವು ರದ್ದಾಗಿವೆ.
ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಶಾಮಿಯಾನ ಮತ್ತು ಕ್ಯಾಟರಿಂಗ್ ಉದ್ಯಮಗಳಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಇದರ ವ್ಯಾಪ್ತಿಯಲ್ಲಿ ದುಡಿಯುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದರಿಂದ ಮದುವೆ, ಸಭೆ, ಸಮಾರಂಭಗಳ ಸಂಖ್ಯೆ ಏರಿಕೆಯಾಗಿದ್ದು, ಉದ್ಯಮ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿತ್ತು. ಕಳೆದ ವಾರದಿಂದ ಮತ್ತೆ ಕರೊನಾ ಆರ್ಭಟ ಹೆಚ್ಚಾಗಿದ್ದರಿಂದ ಸರ್ಕಾರ ಸಭೆ, ಸಮಾರಂಭಗಳಿಗೆ ನಿರ್ಬಂಧ ವಿಧಿಸಿದ್ದು, ಮದುವೆಗೆ 50 ಜನರ ಮಿತಿ ಹೇರಿದೆ. ಇದರಿಂದ ಜನರು ಸಣ್ಣ ಹಾಲ್ಗಳಲ್ಲಿ, ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸಮಾರಂಭ ಮುಗಿಸುತ್ತಿದ್ದಾರೆ. ಲಾಕ್‌ಡೌನ್ ಅನಿಶ್ಚಿತತೆಯಿಂದ ಅನೇಕ ಮಂದಿ ಸಮಾರಂಭಗಳನ್ನೇ ಮುಂದೂಡುತ್ತಿದ್ದಾರೆ.
ಮುಂಗಡ ನೀಡಿದ್ದೂ ರದ್ದು
ಶಾಮಿಯಾನ ಮಾಲೀಕರದ್ದೂ ಇದೇ ಸ್ಥಿತಿ. ಹೆಚ್ಚು ಜನ ಸೇರಲು ಅವಕಾಶ ಇಲ್ಲದಿರುವುದರಿಂದ ಶಾಮಿಯಾನದ ಅವಶ್ಯಕತೆ ಇರುವುದಿಲ್ಲ. ಮದುವೆಗಳು ಸಭಾಂಗಣದಲ್ಲಿ ನಡೆಯುತ್ತವೆ. ಮನೆಯಲ್ಲಿ ಹೆಚ್ಚು ಜನ ಸೇರದ ಕಾರಣ ಶಾಮಿಯಾನಕ್ಕೆ ಮುಂಗಡ ನೀಡಿದವರೂ ರದ್ದುಪಡಿಸಿದ್ದಾರೆ. ಚೇರ್, ಪಾತ್ರೆ, ಟೇಬಲ್‌ಗಳ ಅವಶ್ಯಕತೆಯೂ ಇಲ್ಲದೆ ಇರುವುದರಿಂದ ಬಾಡಿಗೆಗೆ ಪಡೆಯುವ ಪ್ರಮೇಯವೂ ಇಲ್ಲದಂತಾಗಿದೆ. ವೇದಿಕೆ ಅಲಂಕಾರ, ಹೂವು ಮಾರಾಟಗಾರರು, ಫೋಟೋಗ್ರಾಫರ್, ವಿಡಿಯೋಗ್ರಾಫರ್, ಅಡುಗೆ ಮಾಡುವವರು, ಪುರೋಹಿತರು, ಟ್ಯಾಕ್ಸಿ, ಬಸ್, ವ್ಯಾನ್ ಚಾಲಕ, ಮಾಲೀಕರಿಗೆ ಈ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯ ಲಾಕ್‌ಡೌನ್ ಬಹಳಷ್ಟು ನಷ್ಟ ಉಂಟು ಮಾಡಿದೆ. ಹೂವು ಮಾರಾಟಕ್ಕೂ ನಿರ್ಬಂಧ ವಿಧಿಸಿದ್ದರಿಂದ ಮಾರಾಟಗಾರರಿಗೂ, ಖರೀದಿದಾರರಿಗೂ ಸಮಸ್ಯೆ ಎದುರಾಗಿದೆ. ಫೋಟೋಗ್ರಾಫರ್, ವಿಡಿಯೋಗ್ರಾಫರ್‌ಗೆ ಪ್ರಸ್ತುತ ಮದುವೆಯಂಥ ಸಮಾರಂಭಗಳ ಬೇಡಿಕೆಯಷ್ಟೇ ಇದೆ.
ವರ್ಷದಿಂದ ಶಾಮಿಯಾನ ಉದ್ಯಮ ಸಂಕಷ್ಟದಲ್ಲಿದೆ. ಈಗ ಮತ್ತೆ ನಿರ್ಬಂಧ, ವಾರಾಂತ್ಯ ಲಾಕ್‌ಡೌನ್‌ನಿಂದ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ. ಗೋಡೌನ್ ಬಾಡಿಗೆ ಪಾವತಿ ಮಾಡಲು ಸಾಧ್ಯವಾಗದೆ ಮನೆಯಲ್ಲೆ ಶಾಮಿಯಾನ ಮತ್ತು ಪಾತ್ರೆಗಳನ್ನು ರಾಶಿ ಹಾಕುವ ಸ್ಥಿತಿ ಇದೆ. ಮೇ 5ರವರೆಗೆ ಅನೇಕ ಪೂರ್ವ ನಿಗದಿತ ಕಾರ್ಯಕ್ರಮಗಳು ರದ್ದಾಗಿದ್ದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಕೆಲಸಗಾರರಿಗೆ ಸಂಬಳ ಪಾವತಿಯೂ ಸಾಧ್ಯವಾಗುತ್ತಿಲ್ಲ.
ವಿಜಯ ಸುವರ್ಣ, ಸಂಚಾಲಕರು, ಶಾಮಿಯಾನ ಸಂಯೋಜಕರ ಒಕ್ಕೂಟ
ಕರಾವಳಿ ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಮುಂಬೈ ಮತ್ತು ಬೆಂಗಳೂರಿನಿಂದ ಅಗಮಿಸುವವರು ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಕೋವಿಡ್ ಹಾವಳಿಯಿಂದ ಎಲ್ಲರೂ ನಷ್ಟದಲ್ಲಿದ್ದಾರೆ. ಕೆಲವರಿಗೆ ತವರೂರಿಗೆ ಬರಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಸಭೆ, ಸಮಾರಂಭ, ಮದುವೆ ಕಡಿಮೆ ಇತ್ತು. ಈಗ ಸರ್ಕಾರ ವಾರಾಂತ್ಯ ಕರ್ಫ್ಯೂ ವಿಧಿಸಿ, ಹಲವು ನಿರ್ಬಂಧ ಹೇರಿದ್ದರಿಂದ ಕ್ಯಾಟರಿಂಗ್ ಉದ್ಯಮ ಸಂಕಷ್ಟದಲ್ಲಿದೆ.
ಪವನ್ ಅಚಾರ್ಯ, ಕ್ಯಾಟರಿಂಗ್ ಉದ್ಯಮಿ, ಕಾಪು