ಹರಿಹರದಲ್ಲಿ ಧರಣಿ ಸ್ಥಳದಲ್ಲೇ ಅಡುಗೆ ತಯಾರಿಸಿ ಆಕ್ರೋಶ

Hrr23Dss3
Published on

ಹರಿಹರ: ವಸತಿ ಸೌಲಭ್ಯಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಗರದ ತಾಲೂಕು ಕಚೇರಿ ಎದುರು ಧರಣಿ ನಡೆಸುತ್ತಿರುವ ಕಡ್ಲೆಗೊಂದಿ, ಭಾನುವಳ್ಳಿ ಗ್ರಾಮಗಳ ನಿರ್ವಸತಿಕರು ಮಂಗಳವಾರ ಧರಣಿ ಸ್ಥಳದಲ್ಲೇ ಅಡುಗೆ ಮಾಡಿ ಪ್ರತಿಭಟಿಸಿದರು.

ಒಲೆ ಹಚ್ಚಿದ ಪ್ರತಿಭಟನಾನಿರತ ಮಹಿಳೆಯರು ಸ್ಥಳದಲ್ಲೇ ರೊಟ್ಟಿ, ಅನ್ನ, ಸಾಂಬಾರು ತಯಾರಿಸಿ, ಊಟ ಮಾಡಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಈ ಎರಡೂ ಗ್ರಾಮಗಳಲ್ಲಿ 200 ಕ್ಕೂ ಹೆಚ್ಚು ದಲಿತ, ಹಿಂದುಳಿದ ಸಮುದಾಯದವರು ಗುಡಿಸಲುಗಳಲ್ಲಿ ಹಲವು ದಶಕಗಳಿಂದ ಬದುಕುತ್ತಿದ್ದಾರೆ. ಸಂಘಟನೆ ನೇತೃತ್ವದಲ್ಲಿ ಕಳೆದ 29 ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ಆದರೆ, ತಾಲೂಕು ಆಡಳಿತ ಸಮಸ್ಯೆ ಪರಿಹಾರಕ್ಕೆ ತೋರಿಕೆಯ ಪ್ರಕ್ರಿಯೆ ಮಾಡುತ್ತಾ ಸಮಯ ಕಳೆಯುತ್ತಿದೆ ಎಂದು ದೂರಿದರು.

ತಕ್ಷಣ ಪರಿಹಾರ ಸೂಚಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ, ಹರಿಹರ ಬಂದ್, ರಸ್ತೆ ತಡೆ, ಜೈಲ್ ಭರೋನಂತಹ ಉಗ್ರ ಚಳವಳಿ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಕಡ್ಲೆಗೊಂದಿ ಗ್ರಾಪಂ ಸದಸ್ಯೆ ಮಾತಂಗೆಮ್ಮ ತಿಮ್ಮಪ್ಪ, ಎಸ್.ಟಿ. ಹನುಮಂತಪ್ಪ, ಜ್ಯೋತಿ, ಶೈಲಾ, ಸುನೀತಾ ಸಂಜೀವಪ್ಪ, ರುಕ್ಮಿಣಿ, ಮಾಗೋಡು ಹನುಮಕ್ಕ, ಶಾಂತಮ್ಮ, ಮುಬೀನಾ, ಮಲ್ಲಮ್ಮ, ಗುಡ್ಡಪ್ಪ, ಪರಶುರಾಮ, ಮರಿಯಮ್ಮ, ಕೊಟ್ರೇಶ್, ಶಂಷಾದ್, ಮುಬೀನಾಬಾನು, ಗಂಗಮ್ಮ ಇತರರಿದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net