

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಗೆ ದಿನದ ಬಾಡಿಗೆ ಆಧಾರದಲ್ಲಿ ವಿದ್ಯುತ್ಚಾಲಿತ ಬಸ್ಗಳನ್ನು ಗುತ್ತಿಗೆ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಹಂಗೇರಿಯ ಖಾಸಗಿ ಕಂಪನಿ ಬಸ್ಗಳನ್ನು ಕೊಡಲು ಮುಂದೆ ಬಂದಿದ್ದು, ಗುತ್ತಿಗೆ ಪಡೆಯುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಬಸ್ಗಳು 30, 40, 50 ಆಸನ ಹೊಂದಿದ್ದು, 40 ಆಸನವುಳ್ಳ ಬಸ್ ಬಾಡಿಗೆ ದರ ದಿನಕ್ಕೆ 6 ಸಾವಿರ ರೂ. ಇದೆ. ನಿರ್ವಹಣೆ ಹಾಗೂ ರೀಚಾರ್ಜ್ ವೆಚ್ಚವನ್ನು ಗುತ್ತಿಗೆ ಕಂಪನಿಯೇ ವಹಿಸಿಕೊಳ್ಳಲು ಒಪ್ಪಿದ್ದು, ಗುತ್ತಿಗೆ ಪಡೆಯುವ ಕುರಿತು ಪರಿಶೀಲನೆ ನಡೆದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮಹಾರಾಷ್ಟ್ರ, ಅಸ್ಸಾಂ, ಹರಿಯಾಣ ಸರ್ಕಾರಗಳಿಗೂ ಈ ಕಂಪನಿ ಪ್ರಸ್ತಾವನೆ ಸಲ್ಲಿಸಿದೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅಸ್ಸಾಂನಲ್ಲೂ ಒಪ್ಪಂದ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಈ ಒಡಂಬಡಿಕೆ ಪ್ರಕ್ರಿಯೆ ಅವಲೋಕಿಸಿ, ತೀರ್ಮಾನ ಕೈಗೊಳ್ಳಲು ಮತ್ತು ಈ ನಿಟ್ಟಿನಲ್ಲಿ ಹೆಚ್ಚು ಪಾರದರ್ಶಕತೆ ಕಾಯ್ದುಕೊಳ್ಳಲು ತೀರ್ವನಿಸುತ್ತಿದ್ದೇವೆ ಎಂದರು.
ತೆರಿಗೆ ವಸೂಲಿ ಕುಸಿತ: ಸಾರಿಗೆ ಇಲಾಖೆ ತೆರಿಗೆ ಸಂಗ್ರಹ ಈ ಬಾರಿ ಸುಮಾರು 2 ಸಾವಿರ ಕೋಟಿ ರೂ.ವರೆಗೆ ಕಡಿಮೆ ಆಗುವ ನಿರೀಕ್ಷೆ ಇದ್ದು, ತೆರಿಗೆ ವಸೂಲಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದರು.
ಏಕರೂಪ ರಸ್ತೆ ತೆರಿಗೆ: ಏಕರೂಪ ರಸ್ತೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ತೆರಿಗೆ ಉಳಿಸಲು ದೊಡ್ಡ ಮೊತ್ತದ ವಾಹನಗಳನ್ನು ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಸುವುದು ತಪ್ಪುತ್ತದೆ. ರಾಜ್ಯಕ್ಕೆ ಹೆಚ್ಚು ಆದಾಯ ಬರುವ ನಿರೀಕ್ಷೆಯಿದೆ ಎಂದು ಸವದಿ ಹೇಳಿದರು. ದುಬಾರಿ ಬೆಲೆ ವಾಹನಗಳನ್ನು ತೆರಿಗೆ ಕಡಿಮೆಯಿರುವ ರಾಜ್ಯಗಳಲ್ಲಿ ನೋಂದಣಿ ಮಾಡಿಸುವ ಪ್ರಕರಣಗಳು ಹೆಚ್ಚಿದ್ದವು. ಏಕರೂಪ ತೆರಿಗೆಯಿಂದ ಇದಕ್ಕೆ ಕಡಿವಾಣ ಬೀಳಲಿದೆ ಎಂದರು.
ಅಂತರ ನಿಗಮ ವರ್ಗಾವಣೆ ಇಲ್ಲ: ಸಾರಿಗೆ ಸಂಸ್ಥೆ ಸಿಬ್ಬಂದಿ ಅಂತರ ನಿಗಮ ವರ್ಗಾವಣೆ ಇಲ್ಲ. ಬದಲಾಗಿ ಆಯಾ ನಿಗಮ ವ್ಯಾಪ್ತಿಯಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ತೀರ್ವನಿಸಿರುವುದಾಗಿ ಸವದಿ ತಿಳಿಸಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ, ಎನ್ಇಕೆಆರ್ಟಿಸಿಗಳಲ್ಲಿ ಸುಮಾರು 1.32 ಲಕ್ಷ ಚಾಲಕ/ನಿರ್ವಾಹಕರಿದ್ದು, ಒಂದು ನಿಗಮದಿಂದ ಇನ್ನೊಂದು ನಿಗಮಕ್ಕೆ ವರ್ಗಾವಣೆ ಕೋರಿಕೆ ಹೆಚ್ಚು ಬರುತ್ತಿವೆ. ಆದರೆ, ನಿಗಮಗಳಲ್ಲಿ ಸಂಬಳದ ವ್ಯತ್ಯಾಸವಿರುವುದರಿಂದ ಅಂತರ ನಿಗಮ ವರ್ಗಾವಣೆ ಸಮಸ್ಯೆಯಾಗಿದ್ದು, ಅದನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಟೆಂಡರ್ ರದ್ದು
ಬಿಎಂಟಿಸಿಗೆ 300, ಕೆಎಸ್ಆರ್ಟಿಸಿಗೆ 50, ಎನ್ಡಬ್ಲ್ಯುಯುಕೆಆರ್ಟಿಸಿಗೆ 50 ಸೇರಿ ಒಟ್ಟು 400 ವಿದ್ಯುತ್ ಚಾಲಿತ ಬಸ್ ಖರೀದಿಸಲು ಈ ಹಿಂದೆಯೇ ಟೆಂಡರ್ ಕರೆಯಲಾಗಿತ್ತು. ಒಂದೇ ಕಂಪನಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ದರ ನಿಗದಿಯಲ್ಲಿ ಹೊಂದಾಣಿಕೆಯಾಗದ ಕಾರಣ ಹಾಗೂ ಮತ್ತೆ ಕೆಲವು ಕಂಪನಿ ಟೆಂಡರ್ನಲ್ಲಿ ಭಾಗವಹಿಸಲು ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯಲಾಗುತ್ತಿದೆ ಎಂದರು.
ನಿಗಮ ವಿಲೀನವಿಲ್ಲ
ನಷ್ಟದಲ್ಲಿರುವ ನಿಗಮಗಳನ್ನು ವಿಲೀನಗೊಳಿಸುವ ಚಿಂತನೆ ಇಲ್ಲ. ಅದರ ಬದಲಾಗಿ ಪ್ರಯಾಣ ದರ ಹೆಚ್ಚಿಸದೆ ಸೋರಿಕೆ ಕಡಿಮೆ ಮಾಡಿ ನಷ್ಟ ಕಡಿಮೆ ಮಾಡುವ ಕಡೆ ಚಿಂತನೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದರು. ಸಾರಿಗೆ ಸಂಸ್ಥೆಯಲ್ಲಿ ಸುಮಾರು 2,600 ನಿರುಪಯುಕ್ತ ಬಸ್ಗಳಿದ್ದು, ಅವುಗಳನ್ನು ಖರೀದಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಈ ಬಸ್ಗಳನ್ನು ಮೆಟಲ್ ಸ್ಕ್ರಾಪ್ ಟ್ರೇಡಿಂಗ್ ಕಾಪೋರೇಷನ್ ಮೂಲಕ ವಿಲೇ ಮಾಡಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.