

ಧಾರವಾಡ: ಸ್ವದೇಶಿ ಹರಿಕಾರ ರಾಜೀವ ದೀಕ್ಷಿತರ ಪ್ರಭಾವದ ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮನಿರ್ಭರ ಯೋಜನೆ ಪ್ರೇರಣೆಯಿಂದ ಆರಂಭವಾದ ಸಾಂಪ್ರದಾಯಿಕ ಕೋಲ್ಡ್ ಪ್ರೆಸ್ಸಿಂಗ್ (ಗಾಣದ ಎಣ್ಣೆ) ಉದ್ಯಮವು ನಗರದಲ್ಲಿ ಕ್ರಾಂತಿ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ.
ರಾಜೀವ್ ಅವರ ಸ್ವದೇಶಿ ಆಂದೋಲನದಿಂದ ಪ್ರಭಾವಿತರಾದ, ನಗರದ ಪುರುಷೋತ್ತಮ ಮಾಡಿಕರ ಉದ್ಯಮ ಆರಂಭಿಸಿದ್ದಾರೆ. ಉದ್ಯಮ ಆರಂಭಿಸುವುದಲ್ಲದೆ, ಶುದ್ಧ ಎಣ್ಣೆಯಿಂದ ಜನರಿಗೆ ಆಗುವ ಪ್ರಯೋಜನಗಳ ಸಂಪೂರ್ಣ ಸಂಶೋಧನೆ ನಡೆಸಿದ್ದಾರೆ. ಇದೇ ಕಾರಣಕ್ಕೆ ಉದ್ಯಮದಲ್ಲಿ ಯಶಸ್ಸು ಸಾಧಿಸಿದ್ದಾರೆ. ಅಲ್ಲದೆ, ಗಾಣ ನಡೆಸುವ ಕುರಿತು ನೂರಾರು ಯುವಕರಿಗೆ ತರಬೇತಿ ನೀಡಿ ಸ್ವದೇಶಿ ಉದ್ಯಮದಲ್ಲಿ ತೊಡಗಲು ಪ್ರೇರೇಪಿಸಿ ಅವರ ಜೀವನಕ್ಕೂ ದಾರಿ ತೋರಿದ್ದಾರೆ. ಜನರು ಇಂದಿನ ದಿನಗಳಲ್ಲಿ ಬಳಸುತ್ತಿರುವ ಎಣ್ಣೆಯಿಂದ ಆಗುವ ದುಷ್ಪರಿಣಾಮ ಹಾಗೂ ಶುದ್ಧ ಗಾಣದ ಎಣ್ಣೆಯಿಂದ ಆಗುವ ಉಪಯೋಗಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
4 ವರ್ಷದ ಹಿಂದೆ ಹೆಬ್ಬಳ್ಳಿ ರಸ್ತೆಯಲ್ಲಿ ಉದ್ಯಮ ಆರಂಭಿಸಿರುವ ಪುರುಷೋತ್ತಮ, ಹು-ಧಾ ಅವಳಿ ನಗರದಲ್ಲಿ 4 ಮಳಿಗೆ ಸ್ಥಾಪಿಸಿದ್ದಾರೆ. ಇದೀಗ ನಗರದಲ್ಲಿ 5ನೇ ಮಳಿಗೆ ಆರಂಭಕ್ಕೆ ಸಿದ್ಧವಾಗಿದ್ದಾರೆ. ಕೋಲ್ಡ್ ಪ್ರೆಸ್ಸಿಂಗ್ ಘಟಕದಲ್ಲಿ ಶುದ್ಧ ಶೇಂಗಾ, ಕುಸುಬೆ, ಸೂರ್ಯಕಾಂತಿ, ಸಾಸಿವೆ, ಎಳ್ಳು, ಕೊಬ್ಬರಿ ತೈಲ ಉತ್ಪಾದಿಸಲಾಗುತ್ತಿದೆ. ಈ ಉದ್ಯಮ ಗಾಣದ ಮಾಲೀಕರಿಗೆ ಮಾತ್ರವಲ್ಲ, ಎಣ್ಣೆ ಕಾಳು ಬೆಳೆಯುವ ರೈತರಿಗೆ ಪರೋಕ್ಷವಾಗಿ ಬೇಡಿಕೆ ಹೆಚ್ಚಿಸಿದೆ.
ಇಲ್ಲಿನ ಕೆಲಗೇರಿ ರಸ್ತೆ ಸನ್ಮತಿ ಲೇಔಟ್‌ನ ಕೆಯುಡಬ್ಲುೃಎಸ್‌ಬಿ ಕ್ವಾರ್ಟ್‌ರ್ಸ್ ಎದುರಿಗೆ ನೂತನವಾಗಿ ಆರಂಭಿಸಿರುವ ಮಾಡಿಕರ ತೈಲದ ಮಾರಾಟ ಮಳಿಗೆ ಉದ್ಘಾಟನೆ ಆ. 20ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ, ಮುಮ್ಮಿಗಟ್ಟಿಯ ಶ್ರೀ ಬಸವಾನಂದ ಸ್ವಾಮೀಜಿ ಮಳಿಗೆ ಉದ್ಘಾಟಿಸುವರು. ಪಾಲಿಕೆ ಸದಸ್ಯ ಮಂಜುನಾಥ ಬಟ್ಟೆಣ್ಣವರ, ಮಹಿಷಿ ಟ್ರಸ್ಟ್ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ಮುಖ್ಯ ವೈದ್ಯ ಡಾ. ಟಿ. ಮುರುಗನ್, ಕೆವಿಜಿಬಿ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ನರೇಗಲ್ ಆಗಮಿಸುವರು.