ಜಾತಿ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕ

MUNDARAGI
Published on

ಮುಂಡರಗಿ: ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಯಲ್ಲಿ ಹಿಂದು ಧರ್ಮದ ವಿವಿಧ ಜಾತಿಗಳ ಮುಂದೆ ಕ್ರಿಶ್ಚಿಯನ್ ಧರ್ಮ ಸೇರಿಸಿರುವುದನ್ನು ವಿರೋಧಿಸಿ ತಾಲೂಕಿನ ವಿವಿಧ ಸಮುದಾಯಗಳ ಪ್ರಮುಖರು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಜಗದ್ಗುರು ಅನ್ನದಾನೀಶ್ವರ ಮಠದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಸಂಚರಿಸಿ ತಹಸೀಲ್ದಾರ್ ಕಚೇರಿ ತಲುಪಿತು.

ಮಂಜುನಾಥ ಇಟಗಿ ಮಾತನಾಡಿ, ರಾಜ್ಯ ಸರ್ಕಾರದ ಅಪೇಕ್ಷೆಯ ಮೇರೆಗೆ ಹಿಂದುಳಿದ ಆಯೋಗವು ರಾಜ್ಯದಲ್ಲಿ ಕೈಗೊಳ್ಳಲಿರುವ ಜಾತಿ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಹಲವಾರು ಗೊಂದಲಗಳಿಂದ ಕೂಡಿದೆ. ಜಾತಿ ಸಮೀಕ್ಷೆಯಲ್ಲಿ ಕುರುಬ ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಹೀಗೆ ಸುಮಾರು 46 ಹಿಂದು ಜಾತಿಗಳ ಹೆಸರಿನ ಮುಂದೆ ಕ್ರೈಸ್ತ ಜಾತಿಗಳೆಂದು ಗುರುತಿಸಿ ಅದಕ್ಕೆ ಪ್ರತ್ಯೇಕ ಕೋಡ್ ನೀಡಲಾಗಿದೆ. ಈ ಮೊದಲು ಎಲ್ಲಿಯೂ ಇಲ್ಲದ ಈ ರೀತಿಯ ಹೊಸ ಜಾತಿಗಳನ್ನು ಹುಟ್ಟು ಹಾಕಿದವರು ಯಾರು? ಎಂಬುದನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಕ್ರೈಸ್ತ ಪಂಗಡಗಳಾದ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್ ಇತ್ಯಾದಿಗಳ ವಿಂಗಡಣೆ ಮಾಡದೇ ಅವುಗಳನ್ನು ಏಕರೂಪದಲ್ಲಿ ನೋಡಲಾಗಿದೆ. ಆಯೋಗದ ಈ ಪಟ್ಟಿ ಜನರಲ್ಲಿ ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೇರೆ ಮತಗಳಿಗೆ ಮತಾಂತರಗೊಂಡವರಿಗೆ ಮೀಸಲಾತಿ ಹಕ್ಕು ಇರುವುದಿಲ್ಲ. ಆದರೆ ಮತಾಂತರಗೊಂಡ ನಂತರವೂ ತಮ್ಮ ಮೂಲ ಜಾತಿಯ ಜೊತೆಗೆ ಕ್ರೈಸ್ತ ಎಂಬ ಪದ ಸೇರಿಸುವ ಮೂಲಕ ನಮ್ಮ ವರ್ಗದ ಮೀಸಲಾತಿಯನ್ನು ಕಬಳಿಸುವ, ಪಾಲು ಪಡೆಯುವ ಹುನ್ನಾರ ನಡೆದಿದೆಯೋ ಎಂಬ ಸತ್ಯ ತಿಳಿಯಬೇಕಾಗಿದೆ. ಹಿಂದು ಸಮಾಜದ ಜಾತಿಗಳೊಂದಿಗೆ ಅಂಟಿಸಲಾದ ಕ್ರೈಸ್ತ ಹಣೆಪಟ್ಟಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಎಸ್.ಆರ್.ರಿತ್ತಿ ಮಾತನಾಡಿದರು. ತಹಸೀಲ್ದಾರ್ ಪರವಾಗಿ ಗ್ರೇಡ್-2 ತಹಸೀಲ್ದಾರ್ ಕೆ.ರಾಧಾ ಮನವಿ ಸ್ವೀಕರಿಸಿದರು. ಡಾ.ಕುಮಾರಸ್ವಾಮಿ ಹಿರೇಮಠ, ಸುಭಾಷ ಗುಡಿಮನಿ, ಶ್ರೀನಿವಾಸ ಕಟ್ಟಿಮನಿ, ರಮೇಶ ಹುಳಕಣ್ಣವರ, ದೇವಪ್ಪ ಇಟಗಿ, ವಿ.ಜೆ. ಹಿರೇಮಠ, ಶ್ರೀನಿವಾಸ ಅಬ್ಬಿಗೇರಿ, ದೇವು ಹಡಪದ, ಯಲ್ಲಪ್ಪ ಗಣಾಚಾರಿ, ನಾಗರಾಜ ಮುರಡಿ, ಪ್ರಶಾಂತ ಗುಡದ್ದಪ್ಪನವರ, ರವಿಗೌಡ ಪಾಟೀಲ, ಮಂಜುನಾಥ ಮುಧೋಳ, ಅಶೋಕ ಸೀಗೇನಹಳ್ಳಿ, ಮಾರುತಿ ನಾಗರಹಳ್ಳಿ, ಪರಶುರಾಮ ಸುಣಗಾರ, ಮುತ್ತು ಅಳವಂಡಿ, ಲಿಂಬಿಕಾಯಿ, ಜೆ.ಕೆ. ಕೊಳ್ಳಿಮಠ, ಸೋಮು ಹಕ್ಕಂಡಿ, ಡಾ.ಲಕ್ಷ್ಮೀನಾರಾಯಣ ಇಲ್ಲೂರ, ಮಹೇಶ ಜಂತ್ಲಿ, ಪವನ ಲೇಂಡ್ವೆ, ಬಸಪ್ಪ ವಡ್ಡರ, ನಾಗರಾಜ ಹೊಸಮನಿ, ಅಶೋಕ ಚೂರಿ, ವಿನಯ ಗಂಧದ, ಆರ್.ವೈ. ಪಾಟೀಲ, ಮಾರುತಿ ಭಜಂತ್ರಿ, ಸುರೇಶ ಬಾರಿಗಿಡದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net