

ಬೆಂಗಳೂರು: ಪ್ರಸ್ತುತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಡೆದಿರುವ ಜಾತಿ ಸಮೀಕ್ಷೆ ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಸಾಧ್ಯವಾಗದೆ ಸಮಯ ವಿಸ್ತರಣೆ ಮಾಡಲಾಗಿದೆ. ಜತೆಗೆ ಸರ್ವೆಗೆ ನಿಯೋಜನೆ ಆಗಿರುವ ಶಿಕ್ಷಕರಿಗೆ ಬೆಳಗಿನ ಪಾಠದ ಬಳಿಕ ಸಮೀಕ್ಷೆಗೆ ತೆರಳಲು ಸೂಚಿಸಿರುವುದು ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆ ಉಂಟಾಗಲಿದೆ ಎಂಬ ಆಕ್ಷೇಪ ಪಾಲಕರ ವಲಯದಿಂದ ಕೇಳೀಬಂದಿದೆ.
ಶಿಕ್ಷಕರು ಬೆಳಗ್ಗೆ 8ರಿಂದ ಮಧ್ಯಾಹ್ನ 1ರ ವರೆಗೆ ಶಾಲೆಯಲ್ಲಿ ಪಾಠ ಮಾಡಿ ತಕ್ಷಣವೇ ಸಮೀಕ್ಷೆಗೆ ತೆರಳಬೇಕಿದೆ. ಈ ಎರಡೂ ಕೆಲಸವನ್ನು ಒಟ್ಟಿಗೆ ನಿರಂತರವಾಗಿ ಹೇಗೆ ಮಾಡುವುದೆಂದು ಬೋಧಕ ವಲಯದಲ್ಲಿ ಸಂದಿಗ್ಧತೆಯನ್ನು ಸೃಷ್ಟಿಸಿದೆ. ಈ ಮಧ್ಯೆ ಮಕ್ಕಳನ್ನು ಬೆಳಗ್ಗೆಯೇ ಸಜ್ಜುಗೊಳಿಸಿ ಶಾಲೆಗೆ ಬಿಡಲು ಪೋಷಕರಿಗೆ ಹೆಚ್ಚುವರಿ ಹೊಣೆ ಹೊರಬೇಕಾಗುತ್ತದೆ. ಸಮೀಕ್ಷೆಗಾಗಿ ಶೈಕ್ಷಣಿಕ ವೇಳಾಪಟ್ಟಿಯನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡುತ್ತಿರುವುದು ಎಷ್ಟು ಸರಿ ಎಂಬುದಾಗಿ ಪೋಷಕರು ಪ್ರಶ್ನಿಸಿದ್ದಾರೆ.
ಪರಿಷ್ಕೃತ ಶಾಲಾ ಸಮಯವಾದ 8 ಗಂಟೆಯೊಳಗೆ ಮಕ್ಕಳಿಗೆ ಸ್ನಾನ, ಸಮವಸ್ತ್ರ, ತಿಂಡಿ ಮಾಡಿಸಿ ಶಾಲೆಗೆ ಸರಿಯಾದ ಸಮಯಕ್ಕೆ ಬಿಡಬೇಕಾಗುತ್ತದೆ. ಇದಕ್ಕಾಗಿ ನಾವು ಮುಂಜಾನೆ 6 ಗಂಟೆಗೆ ಮುನ್ನ ಎದ್ದು ಮನೆಗೆಲಸವನ್ನು ಮಾಡಬೇಕು. ಕಚೇರಿಗೆ ಹೋಗುವ ಸಮಯವನ್ನು ಹೊಂದಿಸಿಕೊಂಡು ಮಕ್ಕಳನ್ನು ಸ್ಕೂಲ್‌ಗೆ ಬಿಡಲು ಕಷ್ಟವಾಗುತ್ತದೆ. ಪಾಲಕರ ಸಮಸ್ಯೆಯನ್ನು ಗಮನಿಸದೆ ಏಕಾಏಕಿ ಸಮಯ ಬದಲು ಮಾಡಿದ್ದು ಸರಿಯಲ್ಲ. ಶಿಕ್ಷಕರನ್ನು ಸರ್ವೆ ಬಳಸುತ್ತಿರುವುದರಿಂದ ನಮ್ಮ ಮಕ್ಕಳಿಗೆ ಈ ಅವಧಿಯಲ್ಲಿ ಸರಿಯಾದ ಬೋಧನೆ ಆಗದು ಎಂಬ ಅನುಮಾನ ಬಂದಿದೆ ಎಂದು ಕೆಲ ಪಾಲಕರು ಅಳಲು ತೋಡಿಕೊಂಡಿದ್ದಾರೆ.
ಬಿಸಿಯೂಟ ವಿತರಣೆ ಹೇಗೆ:
ಪಾಲಿಕೆ ಶಾಲೆ ಸೇರಿ ಸರ್ಕಾರಿ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸಲಾಗುತ್ತಿದೆ. ಬಹುತೇಕ ಎಲ್ಲ ಶಾಲೆಗಳಲ್ಲೂ ಮಧ್ಯಾಹ್ನ 12ರಿಂದ ಆರಂಭವಾಗುವ ಬಿಸಿಯೂಟ ಬದಲಾದ ಸಮಯದಿಂದಾಗಿ ಯಾವಾಗ ಊಟ ಬಡಿಸಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ನಗರದ ಹೆಚ್ಚಿನ ಶಾಲೆಗಳಿಗೆ ಇಸ್ಕಾನ್ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳು ಬಿಸಿಯೂಟ ಸರಬರಾಜು ಮಾಡುತ್ತಿವೆ. ಈಗ ಊಟದ ಸಮಯವೂ ಬದಲಾದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಬಡಿಸುವ ಹೊಣೆ ವಹಿಸುವವರು ಯಾರು ಎಂಬ ಪ್ರಶ್ನೆ ಎದ್ದಿದೆ.
2,000 ಸಿಬ್ಬಂದಿಗೆ ವಿನಾಯಿತಿ:
ಜಾತಿ ಸಮೀಕ್ಷೆಗಾಗಿ ನಿಯೋಜನೆಗೊಂಡಿದ್ದ ಶಿಕ್ಷಕರ ಸಹಿತ ಇತರ ಇಲಾಖೆಗಳ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲವೆಂದು ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ ಮಾಡಿದ್ದರು. ಅಂಗವಿಕಲರು, ಆರೋಗ್ಯ ಸಮಸ್ಯೆ, ಗರ್ಭಿಣಿಯರು ಸೇರಿ ಅಸಂಖ್ಯ ಸಿಬ್ಬಂದಿ ಅಹವಾಲು ಸಲ್ಲಿಸಿದ್ದರು. ಇದನ್ನು ಗಮನಿಸಿ ಜಿಬಿಎ ತೀವ್ರ ಸಮಸ್ಯೆ ಎದುರಿಸುತ್ತಿರುವ 2 ಸಾವಿರ ಮಂದಿಗೆ ಸಮೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಇನ್ನೂ ಹಲವು ಮಂದಿಗೆ ವಿನಾಯಿತಿ ಸಿಗುವ ಸಾಧ್ಯತೆ ಇದೆ. ಆದರೆ, ಕೆಲ ಪ್ರದೇಶಗಳಲ್ಲಿ ಸಿಬ್ಬಂದಿ ಅಲಭ್ಯದಿಂದಾಗಿ ಹೊರಗಿನ ಪ್ರದೇಶದವರನ್ನು ಅನಿವಾರ್ಯವಾಗಿ ಬಳಸಬೇಕಾಗುತ್ತದೆ. ಶೇ.90 ಸಿಬ್ಬಂದಿಗೆ ಸಮಸ್ಯೆ ಇಲ್ಲ. ಸಣ್ಣಪುಟ್ಟ ತೊಂದರೆ ನಿವಾರಿಸಿಕೊಂಡು ಸರ್ವೆ ಪೂರ್ಣಗೊಳಿಸಲಾಗುವುದು ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ.