

ಮುಧೋಳ : ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಗಣ್ಯರೊಬ್ಬರು ವೇದಿಕೆ ಏರಿದಾಗ ಅಲ್ಲಿ ನೆರೆದಿದ್ದ ಜನರ ಆಕ್ರೋಶಕ್ಕೆ ಕಾರಣವಾಗಿ ಕೆಲ ಹೊತ್ತು ಗೊಂದಲ ಮೂಡಿತು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಭವನದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉದ್ಘಾಟನೆ ನಂತರ ಉಪನ್ಯಾಸ ನೀಡಲು ಸಿದ್ಧತೆ ನಡೆದಾಗ ಚಿನ್ನಪ್ಪ ಅಂಬಿ ವೇದಿಕೆ ಮೇಲೆ ಏರಿದಾಗ ವಿವಾದ ಕಿಡಿ ಹೊತ್ತಿತು.
ತಳವಾರ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನಕ್ಕಾಗಿ ಪ್ರತಿಪಾದಿಸುವ ಮುಖಂಡ ಚಿನ್ನಪ್ಪ ಅಂಬಿ ಅವರನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ ಕೋರಡ್ಡಿ ವೇದಿಕೆಗೆ ಆಹ್ವಾನಿಸಿದ್ದು ವಾಲ್ಮೀಕಿ ಸಮುದಾಯ ದವರ ಆಕ್ರೋಶಕ್ಕೆ ಕಾರಣವಾಯಿತು.
ತಳವಾರ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ದೊರಕಿಸಿಕೊಡಲು ಚಿನ್ನಪ್ಪ ಅಂಬಿ ನಡೆಸಿದ ಪ್ರಯತ್ನವನ್ನು ವಾಲ್ಮೀಕಿ ಸಮುದಾಯ ಗಮನಿಸುತ್ತಿದೆ. ತಮ್ಮ ಸಮುದಾಯದ ವಿರುದ್ಧ ಹೋರಾಡುವವರನ್ನು ವೇದಿಕೆ ಹಂಚಿಕೊಳ್ಳಲು ಏಕೆ ಆಹ್ವಾನಿಸಿದೀರಿ ಎಂದು ತಹಸೀಲ್ದಾರ್ ಮಹದೇವ ಸನಮುರಿ ಅವರನ್ನು ಪ್ರಶ್ನಿಸಿದರು.
ಪರಿಸ್ಥಿತಿ ಹದಗೆಡುವ ಮುನ್ನವೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ ಕೋರಡ್ಡಿ ಕ್ಷಮೆಯಾಚಿಸಿದರು. ಅಂಬಿ ಅವರನ್ನು ವೇದಿಕೆಯಿಂದ ನಿರ್ಗಮಿಸಲು ಹೇಳಿದಾಗ ಗದ್ದಲ ನಿಯಂತ್ರಣಕ್ಕೆ ಬಂದಿತು.
ನಂತರ ಕಾರ್ಯಕ್ರಮ ಯಥಾವತ್ತಾಗಿ ಜರುಗಿತು. ನಗರಸಭೆ ಅಧ್ಯಕ್ಷ ಸುನಂದಾ ತೇಲಿ ಉದ್ಘಾಟನೆ ನೆರವೇರಿಸಿದರು. ಯಡಹಳ್ಳಿಯ ಚಂದ್ರಶೇಖರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಲೋಕಾಪುರ ಪ್ರೌಢಶಾಲೆಯ ಎಚ್.ಎಫ್ .ನಾಯಕ ಉಪನ್ಯಾಸ ನೀಡಿದರು. ಶಂಕರ ತಿಮ್ಮಾಪುರ, ಬೆಳಗಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೂಪಾ ಹೊಸಹಳ್ಳಿ, ಉಪಾಧ್ಯಕ್ಷೆ ಸಹನಾ ಸಾಂಗ್ಲಿಕರ, ನಗರಸಭೆ ಉಪಾಧ್ಯಕ್ಷ ಮಹಿಬೂಬ ಬಾಗವಾನ, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಭೀಮಪ್ಪ ತಳವಾರ, ಚನ್ನಬಸು ಮತ್ತೂರು, ತಾಲೂಕು ಪಂಚಾಯಿತಿ ಇಒ ಉಮೇಶ ಸಿದ್ನಾಳ, ಸಿಪಿಐ ಮಹದೇವ ಶಿರಹಟ್ಟಿ, ನಗರಸಭೆ ಸಿಒ ಗೋಪಾಲ ಕಾಸೆ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಜಡಗಣ್ಣ ಬಾಲಣ್ಣ ವೃತ್ತದಿಂದ ಪ್ರಾರಂಭವಾದ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಾ.ಬಿ.ಆರ್. ಅಂಬೇಡ್ಕರ್ ಭವನ ತಲುಪಿತು.