ವರದಿಗಾರಿಕೆಯಲ್ಲಿ ಜಾತಿ, ಧರ್ಮ, ಭ್ರಷ್ಟತೆಗೆ ಅವಕಾಶ ಸಲ್ಲದು

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯನ್ನು ಸುಧೀರ್ ಕುಮಾರ್ ರೆಡ್ಡಿ ಉದ್ಘಾಟಿಸಿದರು. ಡಾ.ಕರಿಕಾಲನ್, ಹರಿಪ್ರಸಾದ್ ಅಡ್ಪಂಗಾಯ, ಪುಷ್ಪರಾಜ್ ಬಿ.ಎನ್. ಮೊದಲಾದವರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯನ್ನು ಸುಧೀರ್ ಕುಮಾರ್ ರೆಡ್ಡಿ ಉದ್ಘಾಟಿಸಿದರು. ಡಾ.ಕರಿಕಾಲನ್, ಹರಿಪ್ರಸಾದ್ ಅಡ್ಪಂಗಾಯ, ಪುಷ್ಪರಾಜ್ ಬಿ.ಎನ್. ಮೊದಲಾದವರಿದ್ದರು.
Published on
ಮಂಗಳೂರು: ಪತ್ರಕರ್ತ ತನ್ನ ವರದಿಗಾರಿಕೆಯಲ್ಲಿ ಜಾತಿ, ಧರ್ಮ ಹಾಗೂ ಭ್ರಷ್ಟತೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ನ್ಯೂಸ್ 18 ಕನ್ನಡ ವಾಹಿನಿಯ ಪ್ರಧಾನ ಸಂಪಾದಕ ಹರಿಪ್ರಸಾದ್ ಅಡ್ಪಂಗಾಯ ಹೇಳಿದರು.
ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಇದರ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಮಂಗಳೂರು ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ಸುಳ್ಳು ಸುದ್ದಿ ತಡೆಯುವುದು ಪತ್ರಕರ್ತನ ಜವಾಬ್ದಾರಿ. ಆದರೆ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ನಡುವೆ ಸುಳ್ಳು ಸುದ್ದಿಗಳನ್ನು ತಡೆಯುವುದು ಸವಾಲಾಗಿದೆ. ನಾಡಿನ ಇತಿಹಾಸ ಅರ್ಥ ಮಾಡಿಕೊಂಡು ಭವಿಷ್ಯ ಕಟ್ಟುವ ಕೆಲಸ ಮಾಡಬೇಕಾಗಿದೆ. ಅಧ್ಯಯನಶೀಲರಾದಾಗ ಉತ್ತಮ ವರದಿಗಳು ರೂಪುಗೊಳ್ಳಲು ಸಾಧ್ಯ ಎಂದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಉದ್ಘಾಟಿಸಿದರು. ಪತ್ರಕರ್ತರಿಂದ ಸಮಾಜದ ಬದಲಾವಣೆ ಸಾಧ್ಯವಿದೆ. ಜಿಲ್ಲೆಯ ಮಟ್ಟಿಗೆ ಬದಲಾವಣೆ ಆರಂಭವಾಗಿದೆ. ತಪ್ಪು ಮಾಹಿತಿ ಕಡಿಮೆಯಾಗಿ ಉತ್ತಮ ವರದಿಗಳು ಬರುತ್ತಿವೆ. ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಒಂದಲ್ಲ ಒಂದು ಸಿಗಲೇ ಬೇಕು. ಸಮಾಜದ ಶಾಂತಿ ಭಂಗ ಮಾಡುವವರ ವಿರುದ್ಧ ಜನ ನಿಲ್ಲಬೇಕು ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಲನ್ ಮುಖ್ಯ ಅತಿಥಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ನಾಗರಿಕ ಸೇವಾ ಪರೀಕ್ಷೆ ಬರೆಯುವವರು ಸಂಖ್ಯೆ ಕಡಿಮೆ ಇದೆ. ಇಲ್ಲಿನ ಮಕ್ಕಳು ಈ ಬಗ್ಗೆ ಆಸಕ್ತರಾಗಬೇಕು ಎಂದರು.
ಹಿರಿಯ ಪತ್ರಿಕಾ ವಿತರಕ ತಿಮ್ಮಪ್ಪ ಶೆಟ್ಟಿ ಅವರನ್ನು ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸನ್ಮಾನಿಸಿದರು. ಎಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪತ್ರಕರ್ತರ ಮಕ್ಕಳನ್ನು ಪುರಸ್ಕರಿಸಲಾಯಿತು.
ಕೆಯುಡಬ್ಲೂೃಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಸಂಘದ ಪ್ರ.ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ಉಪಸ್ಥಿತರಿದ್ದರು.
ದ.ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ವಿಜಯ್ ಕೋಟ್ಯಾನ್ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಉಪಾಧ್ಯಕ್ಷ ಮೊಹಮ್ಮದ್ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net