

ಹಿರಿಯೂರು: ಹಿಂದುಳಿದ, ದಲಿತರ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ನಾರಾಯಣ ಗುರುಗಳನ್ನು ಅವಮಾನಿಸಿದವರು ಯಾರೇ ಆಗಿರಲಿ ಅಂತಹವರನ್ನು ತಿರಸ್ಕರಿಸಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಸಲಹೆ ನೀಡಿದರು.
ನಗರದ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಈಡಿಗ ಸಮಾವೇಶ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸಮಾಜದ ಇತರ ಜಾತಿಯವರನ್ನು ಯಾವತ್ತೂ ದ್ವೇಷ ಮಾಡಬಾರದು. ಬಂಗಾರಪ್ಪ ಸಿಎಂ ಆಗಿದ್ದಾಗ ಎಂದೂ ಜಾತಿ ರಾಜಕಾರಣ ಮಾಡಲಿಲ್ಲ. ಬಡವರಪರ ಯೋಜನೆಗಳನ್ನು ರೂಪಿಸಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಜೆ ರಹಿತ ನಾರಾಯಣ ಗುರುಗಳ ಜಯಂತಿ, ಅವರ ಹೆಸರಿನಲ್ಲಿ ವಿದ್ಯಾಪೀಠ ಸ್ಥಾಪನೆ, ಪಠ್ಯದಲ್ಲಿ ಅವರ ತತ್ವಸಿದ್ಧಾಂತಗಳ ಸೇರ್ಪಡೆಗೆ ಮನವಿ ಮಾಡಿದ್ದೆ. ಗುರುಗಳ ಜಯಂತಿ ಆಚರಣೆ ಅನಿವಾರ್ಯತೆ ಅರಿತಿದ್ದ ಸಿದ್ದರಾಮಯ್ಯ ಜಾರಿಗೊಳಿಸಿದರು ಎಂದು ಹೇಳಿದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ಬದುಕಿಗೆ ಪೂರಕವಾದ ಸಕಾರಾತ್ಮಕ ಅಂಶಗಳನ್ನು ಯುವಕರು ಸ್ವೀಕರಿಸಿದಲ್ಲಿ ಭವಿಷ್ಯ ಉತ್ತಮವಾಗಿರುತ್ತದೆ. ಶಿಕ್ಷಣವೇ ನಮ್ಮೆಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡಬಲ್ಲದು. ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಂಘಟನೆ ಅನಿವಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಘದ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ನಗರದಲ್ಲಿ ಆರ್ಯ ಈಡಿಗರ ಸಮುದಾಯ ಭವನಕ್ಕೆ ಮಾಜಿ ಸಚಿವ ಡಿ.ಸುಧಾಕರ್ ಅವರು ಸಿದ್ದರಾಮಯ್ಯ ಮೂಲಕ 67 ಲಕ್ಷ ರೂ. ಮಂಜೂರು ಮಾಡಿಸಿದ್ದರು. ಅದರಲ್ಲಿ 15 ಲಕ್ಷ ರೂ. ಬಿಡುಗಡೆ ಆಗುವ ವೇಳೆಗೆ ಸರ್ಕಾರ ಬದಲಾಯಿತು ಎಂದರು.
ಮಾಜಿ ಸಚಿವ ಡಿ.ಸುಧಾಕರ್, ಸಂಘದ ಗೌರವಾಧ್ಯಕ್ಷ ಎಂ.ಕೆ.ವೆಂಕಟಸ್ವಾಮಿ ಮಾತನಾಡಿದರು. ಎಚ್.ಜೀವನ್, ಶಿವಣ್ಣ, ಚಂದ್ರಶೇಖರ್, ಟಿ.ಮಂಜುನಾಥ್, ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಉಮಾದೇವಿ, ಮೀನಾ ಬಾಲರಾಜ್, ವಿಶಾಲಾಕ್ಷಿ ನಾಗರಾಜ್, ಭಾಗ್ಯಾ ತಿಪ್ಪೇಸ್ವಾಮಿ, ಮಂಜುಳಾ ಕೃಷ್ಣ, ಅರುಣಾ ನಾರಾಯಣಸ್ವಾಮಿ ಇತರರಿದ್ದರು.
ಶೋಷಣೆ, ಮೌಢ್ಯ, ದೌರ್ಜನ್ಯದ ವಿರುದ್ಧ ಗುರುಗಳು ಹೋರಾಟ ನಡೆಸಿದ್ದರು. ಶಿವನ ದೇಗುಲಗಳನ್ನು ನಿರ್ಮಿಸುವ ಮೂಲಕ ಶಿವನನ್ನೇ ತನ್ನ ಹತ್ತಿರ ಕರೆಸಿಕೊಂಡಿದ್ದರು. ಈಳವರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿಸಿದ್ದರು. ಎಂ.ತಿಮ್ಮೇಗೌಡ ಅಧ್ಯಕ್ಷರು ರಾಜ್ಯ ಆರ್ಯ ಈಡಿಗರ ಸಂಘ