ಹೈಕಮಾಂಡ್ ಅಂಗಳಕ್ಕೆ ಜಾತಿ ಗಣತಿ ಸಮೀಕ್ಷೆ ಗೊಂದಲ: ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಜತೆ ಚರ್ಚೆ! Caste Census

Caste Census
Published on

Caste Census : ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ವಿಚಾರ ಬಿರುಗಾಳಿ ಸೃಷ್ಟಿಸಿದೆ. ಸಮೀಕ್ಷೆಗೆ ಆಡಳಿತ ಪಕ್ಷದಲ್ಲೇ ಭಾರಿ ವಿರೋಧ ವ್ಯಕ್ತವಾಗಿರುವ ಮಾಹಿತಿ ಇದೆ. ಅಲ್ಲದೆ, ವಿಪಕ್ಷಗಳು ಕೂಡ ಸರ್ಕಾರದ ನಿಲುವಿಗೆ ನಿಗಿ ನಿಗಿ ಕೆಂಡವಾಗಿದೆ. ವಿವಿಧ ಮಠಾಧೀಶರು, ರಾಜಕೀಯ ನಾಯಕರು ಹಾಗೂ ಜನರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಸದ್ಯ ರಾಜ್ಯದಲ್ಲಿ ಜಾತಿಗಣತಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಹೈವೋಲ್ಟೇಜ್ ಸಭೆ ಕೂಡ ನಡೆದಿದೆ.

ಈ ಸಭೆಯಲ್ಲಿ ಜಾತಿಗಣತಿ ಸಮೀಕ್ಷೆ‌ ಬಗ್ಗೆ ಚರ್ಚೆ ನಡೆಸಲಾಗಿದೆ. ಸಂತೋಷ್ ಲಾಡ್ ಸೇರಿ ಹಲವು ಸಚಿವರು ಭಾಗಿಯಾಗಿದ್ದರೆ, ಲಿಂಗಾಯತ ಸಚಿವರು ಸಭೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ಹೈಕಮಾಂಡ್ ಅಂಗಳಕ್ಕೆ ಜಾತಿ ಗಣತಿ ಗೊಂದಲ

ಇನ್ನು ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆ ವಿರುದ್ಧ ಅಪಸ್ವರ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಅಂಗಳಕ್ಕೆ ಜಾತಿ ಗಣತಿ ಗೊಂದಲ ತಲುಪಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜತೆ ಜಾತಿಗಣತಿ ಸಮೀಕ್ಷೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್​ ಚರ್ಚೆ ನಡೆಸಿದ್ದು, ಮುಂದೇನು ಮಾಡಬೇಕೆಂಬ ಕುರಿತು ಮಾತುಕತೆ ನಡೆಸಿದ್ದಾರೆ. ಸಮೀಕ್ಷೆ ಮುಂದೂಡಬೇಕೋ? ಅಥವಾ ನಿಗದಿತ ಅವಧಿಯಲ್ಲಿ ನಡೆಸಬೇಕೋ? ಇಲ್ಲವೇ ಸಮೀಕ್ಷೆಯನ್ನೇ ಕೈಬಿಡಬೇಕೋ ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಇನ್ನು ತೀವ್ರ ವಿವಾದಕ್ಕೆ ಕಾರಣವಾಗಿರುವ ಹಿಂದು ಜಾತಿಗಳ ಜತೆ ಕ್ರೈಸ್ತ ಪದ ಬಳಕೆ ಹಾಗೂ ಹೆಚ್ಚುವರಿ ಜಾತಿಗಳ ಸೇರ್ಪಡೆ ಕೈಬಿಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಇನ್ನು ಸಿಎಂ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಸಮೀಕ್ಷೆ ವಿಚಾರವಾಗಿ ಯಾವ ಅಸಮಾಧಾನವಾಗಲಿ ಅಥವಾ ಗೊಂದಲವಾಗಲಿ ನಮ್ಮ ನಡುವೆ ಇಲ್ಲ. ನಿನ್ನೆ ನಡೆದ ಸಭೆಯಲ್ಲಿ ಏನೂ ಗದ್ದಲವೂ ಆಗಿಲ್ಲ. ಇದು ಜಾತಿಗಣತಿ ಅಲ್ಲ, ಆರ್ಥಿಕ- ಸಾಮಾಜಿಕ ಸಮೀಕ್ಷೆ. ಕಾಂತರಾಜು ವರದಿಯನ್ನು ತಿರಸ್ಕಾರ ಮಾಡಲು ಆಗುವುದಿಲ್ಲ. ಕಾಂತರಾಜು ವರದಿ ಕೂಡಾ ನಮ್ಮ ಮುಂದೆ ಇದೆ. ಇವತ್ತು ಸಿಎಂ ಜತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ. ನಿಗದಿತ ಸಮಯದಲ್ಲಿಯೇ ಈ ಸಮೀಕ್ಷೆ ನಡೆಯಲಿದೆ ಎಂದರು.

ಬಿಬಿಎಂಪಿ ಚುನಾವಣೆ ತಯಾರಿ ಸಭೆ

ಇನ್ನು ಜಾತಿ ಗಣತಿ ವಿವಾದದ ನಡುವೆ ಸುರ್ಜೆವಾಲಾ ಅವರು ತಾಜ್ ವೆಸ್ಟೆಂಡ್​ ಹೋಟೆಲ್‌ನಲ್ಲಿ ಸಭೆ ಕರೆದಿದ್ದಾರೆ. ಸಚಿವರಾದ ದಿನೇಶ್ ಗುಂಡೂರಾವ್, ಭೈರತಿ ಸುರೇಶ್, ಕೆ.ಜೆ ಜಾರ್ಜ್, ರಾಮಲಿಂಗಾ ರೆಡ್ಡಿ ಹಾಗೂ ಜಮೀರ್ ಅಹಮ್ಮದ್ ಭಾಗಿಯಾಗಿದ್ದಾರೆ. ಗ್ರೇಟರ್ ಬೆಂಗಳೂರು ಚುನಾವಣೆ ತಯಾರಿ ಸಂಬಂಧ ಸಮಾಲೋಚನೆ ಹಾಗೂ ಸಚಿವರಿಗೆ ಜವಾಬ್ದಾರಿ ಹಂಚಿಕೆ ಕುರಿತು ಚರ್ಚೆ ನಡೆಯಲಿದೆ.

ಅಂದಹಾಗೆ, ಜಾತಿ ಜನಗಣತಿ ಹೊಸ್ತಿಲಲ್ಲೇ ಸಚಿವ ಸಂಪುಟದಲ್ಲಿ ಭಿನ್ನಮತ ಭುಗಿಲೆದ್ದಿರುವ ಪರಿಣಾಮ ಸೆ.22ರಂದು ಆರಂಭವಾಗಬೇಕಿದ್ದ ಸಮೀಕ್ಷೆ ಮೇಲೆ ಕರಿಛಾಯೆ ಆವರಿಸಿದೆ. ಸಮೀಕ್ಷೆಗೆ ಗೊತ್ತುಪಡಿಸಿದ ಜಾತಿಗಳ ಪಟ್ಟಿ ವಿಚಾರದಲ್ಲಿನ ಎರಡು ಪ್ರಮುಖ ಗೊಂದಲ ಜ್ವಾಲೆಯ ರೂಪ ಪಡೆದು ಆಡಳಿತ ಪಕ್ಷದ ನೆಮ್ಮದಿಯನ್ನೇ ಕದಡಿದೆ. ಗುರುವಾರದ ಬೆಳವಣಿಗೆಯಲ್ಲಿ ಗೊಂದಲ ಮತ್ತು ಪರ-ವಿರೋಧ ಚರ್ಚೆಗೆ ಸಚಿವ ಸಂಪುಟ ಸಭೆ ವೇದಿಕೆಯಾಯಿತು. ಕೆಲವರು ಸಮೀಕ್ಷೆ ನಿಗದಿತ ಅವಧಿಯಲ್ಲೇ ನಡೆಯಬೇಕೆಂದು ಪಟ್ಟು ಹಿಡಿದರೆ ವಿರೋಧದ ದನಿ ತೀವ್ರತೆ ಪಡೆದಿತ್ತು. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರ ತಂಡಕ್ಕೆ ಒಮ್ಮತದ ಪರಿಹಾರ ಸೂತ್ರ ಕಂಡುಕೊಳ್ಳಲು ಜವಾಬ್ದಾರಿ ನೀಡಿದರು. ಆದರೆ, ಸಚಿವರ ತಂಡದಲ್ಲೂ ಮಾತು ವಿಕೋಪಕ್ಕೆ ತಿರುಗಿ ಕೊನೆಗೆ ಎರಡು ಸೂತ್ರ ಸಿದ್ಧವಾಯಿತು. ಅಂತಿಮ ವಿವೇಚನೆ ಸಿಎಂಗೆ ಬಿಡಲಾಯಿತು. ತಡರಾತ್ರಿವರೆಗೆ ಸಿಎಂ ಅಧಿಕೃತ ನಿವಾಸದಲ್ಲಿ ಪ್ರಮುಖ ಸಚಿವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಕಾರ್ಯದರ್ಶಿ ಸಭೆ ನಡೆಸಿ ಸಾಧಕ ಬಾಧಕದ ಬಗ್ಗೆ ಚರ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net