

ಮಡಿಕೇರಿ: ರಾಜ್ಯ ಸರ್ಕಾರದ ವತಿಯಿಂದ ನಡೆಯುವ ಜಾತಿ ಜನಗಣತಿ ಸಂದರ್ಭ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಜಾತಿ, ಭಾಷೆ, ಮಾತೃಭಾಷೆ ಮತ್ತು ಧರ್ಮದ ಕಾಲಂನಲ್ಲಿ ಸರ್ವ ಕೊಡವರು ಕೊಡವ ಎಂದು ನಮೂದಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಇದೇ ಸೆ.೨೨ ರಿಂದ ನಡೆಸುವ ಜಾತಿ ಜನಗಣತಿಯಲ್ಲಿ ಉತ್ತಮ ನಾಳೆಗಾಗಿ ಮತ್ತು ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಕೊಡವ ಎಂದು ನಮೂದಿಸುವುದು ಅತ್ಯವಶ್ಯಕವಾಗಿದೆ. ಆದಿಮಸಂಜಾತ ಏಕ-ಜನಾಂಗೀಯ ಕೊಡವರ ಹಕ್ಕುಗಳು ಖಾತ್ರಿಯಾಗಬೇಕಾದಲ್ಲಿ ಕೊಡವ ಎಂದು ದಾಖಲಿಸಿ ಎಂದು ಕರೆ ನೀಡಿದ್ದಾರೆ.
ಕೊಡವರು ಯಾವುದೇ ಪಂಥಗಳು ಅಥವಾ ಉಪಪಂಗಡಗಳಿಲ್ಲದ ಏಕೈಕ, ಏಕ-ಜನಾಂಗೀಯ ಗುಂಪಾಗಿದ್ದಾರೆ. ವಿಭಿನ್ನ ಗುರುತು, ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ವಿಶಿಷ್ಟ ಜನಾಂಗೀಯ ಸಮುದಾಯವಾಗಿದ್ದಾರೆ. ಜನಗಣತಿದಾರರು ನಿಮ್ಮ ಮನೆ ಮನೆಗೆ ಭೇಟಿ ನೀಡುವಾಗ, ಪ್ರತಿಯೊಬ್ಬ ಕೊಡವರೂ ಜಾತಿ, ಭಾಷೆ, ಧರ್ಮದ ಕಾಲಂನಲ್ಲಿ ಕೊಡವ ಎಂದೇ ನಮೂದಿಸಬೇಕು. ಇದು ರಾಜಕೀಯ, ಆರ್ಥಿಕ ಸಬಲೀಕರಣ ಮತ್ತು ಸಾಂಸ್ಕೃತಿಕ, ಜಾನಪದ ಉನ್ನತಿಯನ್ನು ಸಾಧಿಸಲು ನಿರ್ಣಾಯಕವಾಗಿದೆ. ಅಲ್ಲದೆ ನಮ್ಮ ಸೂಕ್ಷ್ಮತೀಸೂಕ್ಷ್ಮ ಡೇಟಾವನ್ನು ದೃಢೀಕರಿಸುತ್ತದೆ ಎಂದು ತಿಳಿಸಿದ್ದಾರೆ.