ಕೇಂದ್ರ ಸರ್ಕಾರದ ಜಾತಿಗಣತಿಯಿಂದ ನಿಖರ ಸಂಖ್ಯೆ ಲಭ್ಯ

kota
Published on

ಉಡುಪಿ: ದೇಶದಲ್ಲಿ ಜನಗಣತಿ-ಯೊಂದಿಗೆ ಜಾತಿಗಣತಿಗೆ ಕೇಂದ್ರ ಸರ್ಕಾರ ಆದೇಶಿಸಿರುವುದು ಪ.ಜಾತಿ, ಪ. ಪಂಗಡ, ಹಿಂದುಳಿದ ಸಣ್ಣ ಸಮುದಾಯಕ್ಕೆ ಹೊಸ ಶಕ್ತಿ ನೀಡಲಿದೆ. ನಿಖರವಾದ ಅಂಕೆ ಸಂಖ್ಯೆ ಮತ್ತು ವಿವರ ಲಭ್ಯವಾಗಲಿದ್ದು, ಸಣ್ಣ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಶಕ್ತಿ ಪ್ರದರ್ಶನ ಮಾಡಲು ಅಸಾಧ್ಯವಾದ ಸಣ್ಣ ಸಮುದಾಯಗಳಿಗೆ ಹೊಸ ಶಕ್ತಿ ನೀಡಲಿದೆ. ಇಡೀ ದೇಶದ ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲ ಸಮುದಾಯದವರು ಒಟ್ಟಾಗಿ ಸ್ವಾಗತ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಗಣತಿಯಿಂದ ಸಮಬಾಳು, ಸಮಪಾಲಿಗೆ ಅವಕಾಶವಾಗುತ್ತದೆ ಎಂದರು.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕುರ್ಚಿ ಗಂಡಾಂತರ ಬಂದಾಗೆಲ್ಲ ಗಣತಿಯ ವಿವರ ನೀಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ. ಕೇಂದ್ರ ಸರ್ಕಾರ ನೇರವಾಗಿ ಜನಗಣತಿಯೊಂದಿಗೆ ಜಾತಿ ಗಣತಿಗೆ ನಿರ್ದೇಶನ ಕೊಟ್ಟಿದ್ದರಿಂದ ರಾಜ್ಯದ ವರದಿಯನ್ನು ಇಟ್ಟುಕೊಂಡು ಏನು ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಗೆ ಸಿಎಂ ಬಂದಿದ್ದಾರೆ. ಸಿದ್ದರಾಮಯ್ಯ ಕೇಂದ್ರ ಸರ್ಕಾರ ಆದೇಶವನ್ನು ಸ್ವಾಗತಿಸುವುದು ಅನಿವಾರ್ಯವಾಗಿದೆ ಎಂದರು.

ಕೆಟ್ಟ ಪರಂಪರೆ ಹುಟ್ಟು ಹಾಕಿದ ಭಯೋತ್ಪಾದಕರು

ಪೆಹೆಲ್ಗಾಂನಲ್ಲಿ ನೀನು ಹಿಂದುನಾ ಎಂದು ಕೇಳಿ ಜಿಹಾದಿಗಳು ನರಮೇಧ ನಡೆಸಿದ್ದಾರೆ. ಕೆಟ್ಟ ಪರಂಪರೆಯನ್ನು ಭಯೋತ್ಪಾದಕರು ಹುಟ್ಟು ಹಾಕಿದ್ದಾರೆ. ದೇಶದ ಹಿತದೃಷ್ಟಿಯಿಂದ ಮೋದಿ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಪಂಚ ಸ್ವಾಗತಿಸುತ್ತದೆ ಎಂದರು.

ಯುವಕನ ಹತ್ಯೆ ಅಪರಾಧ

ಹತ್ಯೆ, ಹಿಂಸೆ ಯಾರೂ ಮಾಡಿದರೂ ಅಪರಾಧ. ಈ ವಿಚಾರದಲ್ಲಿ ಮತ್ತೊಂದು ವಾದ ಇಲ್ಲ. ಕಾನೂನು ಕ್ರಮ ಖಂಡಿತ ಆಗುತ್ತದೆ. ಭಾರತದ ನೆಲದಲ್ಲಿದ್ದು ಪಾಕಿಸ್ತಾನಕ್ಕೆ ಜೈ ಅನ್ನುವ ಕೆಟ್ಟ ಪರಂಪರೆ ಸಂಪೂರ್ಣ ನಿಲ್ಲಬೇಕು. ಸ್ವತ@ ಸಿದ್ದರಾಮಯ್ಯ ಅಂತವರಿಗೆ ರಕ್ಷಣೆ ಇಲ್ಲ ಎಂದು ಹೇಳಿದ್ದಾರೆ.ಯಾರ ಹತ್ಯೆಯನ್ನು ಕೂಡ ನಾಗರಿಕ ಸಮಾಜ ಸಮರ್ಥನೆ ಮಾಡಲು ಸಾಧ್ಯವಿಲ್ಲ. ಬಿಜೆಪಿ ಹತ್ಯೆ, ಹಿಂಸೆಯನ್ನು ವಿರೋಧಿಸುತ್ತದೆ ಮತ್ತು ಖಂಡಿಸುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net