ಜಾತಿಗಣತಿ ಪರಿಣಾಮ ರಾಜ್ಯ ಸರ್ಕಾರ ಪತನ ಸಾಧ್ಯತೆ

kse
ಜಾತಿ ಗಣತಿ ಕೈ ಬಿಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಕೆ.ಎಸ್.ಈಶ್ವರಪ್ಪ ಮನವಿ ಸಲ್ಲಿಸಿದರು. ಕೆ.ಇ.ಕಾಂತೇಶ್, ಎಂ.ಜಿ.ಬಾಲು, ಸುವರ್ಣಾ ಶಂಕರ್, ಇ.ವಿಶ್ವಾಸ್, ಶ್ರೀಕಾಂತ್, ಕುಬೇರಪ್ಪ ಇತರರಿದ್ದರು.
Published on

ಶಿವಮೊಗ್ಗ: ಜಾತಿ ಗಣತಿ ಮಾಡಬಾರದು. ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ರಾಷ್ಟ್ರಭಕ್ತರ ಬಳಗದ ಪ್ರಮುಖರು ಸೋಮವಾರ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮೂಲಕ ಮನವಿ ಸಲ್ಲಿಸಿದರು.

ಪೂರ್ವ ತಯಾರಿ ಇಲ್ಲದೆ, ಮುಂದಾಲೋಚನೆ ಇಲ್ಲದೆ ರಾಜ್ಯದ ಜನರ ವಿರೋಧದ ನಡುವೆ 7 ಕೋಟಿಗೂ ಜನರ ಗಣತಿಯನ್ನು 15 ದಿನದಲ್ಲಿ ಮುಗಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸಮಂಜಸವಲ್ಲ. ಇಲ್ಲಿನ ಅರ್ಧದಷ್ಟು ಜನಸಂಖ್ಯೆ ಇರುವ ತೆಲಂಗಾಣದಲ್ಲಿ ಗಣತಿ ನಡೆಸಲು 65 ದಿನ ಬೇಕಾಗಿತ್ತು ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಒಬ್ಬ ವ್ಯಕ್ತಿಗೆ 60 ಪ್ರಶ್ನೆಗಳನ್ನು ಕೇಳಿ 15 ದಿನದೊಳಗೆ ಸಮೀಕ್ಷೆ ನಡೆಸುವುದು ಅಸಾಧ್ಯ. ನವರಾತ್ರಿ ಉತ್ಸವ ಸಂದರ್ಭ, ಶಾಲೆಗಳಿಗೂ ರಜೆ ಇರುತ್ತದೆ. ಜನರು ಬೇರೆ ಊರುಗಳಿಗೆ ಪ್ರವಾಸ ತೆರಳಿರುತ್ತಾರೆ. ಹೀಗಾಗಿ ನಿಖರ ಸಮೀಕ್ಷೆ ಸಾಧ್ಯವಿಲ್ಲ. ಇದರ ಬದಲು ಸಮೀಕ್ಷೆ ಮುಂದೂಡುವುದು ಒಳಿತು ಎಂದರು.

ಅಸಂವಿಧಾನಿಕವಾಗಿ ಹಲವು ಜಾತಿಗಳನ್ನು ಸೃಷ್ಟಿಸಿ ಹಿಂದು ಜಾತಿಗಳಿಗೆ ಕ್ರಿಶ್ಚಿಯನ್ ಧರ್ಮ ಸೇರಿಸಿ ಹಿಂದುಗಳಲ್ಲಿ ಒಡಕು ಮೂಡಿಸುವ ಕೆಲಸ ಮಾಡಲಾಗಿತ್ತು. ಈಗ ಅಂತಹ 46ರ ಪೈಕಿ 33 ಜಾತಿ ಕೈಬಿಡಲಾಗಿದೆ. 13 ಜಾತಿಗಳನ್ನು ಪಟ್ಟಿಯಲ್ಲಿ ಮುಂದುವರಿಸಿರುವುದು ಒಪ್ಪಲು ಸಾಧ್ಯವಿಲ್ಲ. ಮತಾಂತರಗೊಂಡರೂ ತಮ್ಮ ಮೂಲ ಜಾತಿಯನ್ನು ಇತರ ಕಾಲಂನಲ್ಲಿ ನಮೂದಿಸಲು ಅವಕಾಶ ಕೊಟ್ಟಿರುವ ಆಯೋಗದ ನಡೆ ಯಾವುದೇ ಕಾರಣಕ್ಕೂ ಸ್ವೀಕಾರವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುವುದಾಗಿ ಹೇಳಿದೆ. ಮೇಲಾಗಿ ರಾಜ್ಯಗಳಿಗೆ ಜಾತಿ ಗಣತಿ ನಡೆಸುವ ಅಧಿಕಾರವೂ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ಸರ್ಕಾರದಲ್ಲಿರುವ ಸಚಿವರೇ ಸಮೀಕ್ಷೆ ವಿರುದ್ಧ ಸಿಡಿದೆದ್ದಿದ್ದಾರೆ. ಈ ಸಮೀಕ್ಷೆ ಪರಿಣಾಮ ರಾಜ್ಯ ಸರ್ಕಾರ ಪತನವಾಗುವ ಲಕ್ಷಣಗಳು ಕಾಣುತ್ತಿರುವುದರಿಂದ ಸಿಎಂ ಸಮೀಕ್ಷೆ ಮಾಡದಿರುವ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಮಾಜಿ ಮೇಯರ್ ಸುವರ್ಣಾ ಶಂಕರ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಶ್ರೀಕಾಂತ್, ಎಂ.ಜಿ.ಬಾಲು, ಕುಬೇರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net