ಹೆಸರಿಗೆ ಮಾತ್ರ ಜಾತಿಗಣತಿ

Caste census in name only
Caste census in name only
Published on

ತೇರದಾಳ(ಗ್ರಾ): ರಾಜ್ಯದಲ್ಲಿ ಕೆಲವು ದಿನಗಳಿಂದ ಜಾತಿಗಣತಿ ಪ್ರಾರಂಭವಾಗಿದೆ. ಆದರೆ, ಸಂಬಂಧಪಟ್ಟ ಸಿಬ್ಬಂದಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಜಾತಿ ಗಣತಿ ಮಾಡಲು ಬಂದ ಸಿಬ್ಬಂದಿ ಸರಿಯಾಗಿ ಮಾಹಿತಿ ಪಡೆಯದೆ ತಮಗೆ ತಿಳಿದಂತೆ ಬರೆದುಕೊಂಡು ಹೋಗಿದ್ದಾರೆ.ನನ್ನ ಮನೆಯಲ್ಲಿ ಸೊಸೆ ಹಾಗೂ ಮೊಮಕ್ಕಳ ಹೆಸರನ್ನು ದಾಖಲು ಮಾಡಿಕೊಂಡಿಲ್ಲ. ಇದಕ್ಕಾಗಿ ನಾನು ಎಲ್ಲಿಗೆ ಹೋಗಲಿ? ಯಾರನ್ನು ಕೇಳಲಿ? ಎಂದು ತುಕಾರಾಮ ಶಿಂಗೆ ತಮ್ಮ ನೋವನ್ನು ತೋಡಿಕೊಂಡರು.

ಪಟ್ಟಣದ ತಕ್ಷಶಿಲಾ ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ದಲಿತ ಮುಖಂಡ ಪಿ.ಎಸ್.ಮಾಸ್ತಿ ಮಾತನಾಡಿ, ಈ ಜಾತಿಗಣತಿ ಕೇವಲ ಹೆಸರಿಗೆ ಮಾತ್ರ ಎನ್ನವಂತೆ ನಡೆಯುತ್ತಿದೆ. ಸಾಕಷ್ಟು ಜನರು ನೋಂದಣಿ ಮಾಡಿಸುವವರು ಉಳಿದುಕೊಂಡಿದ್ದಾರೆ. ಸಿಬ್ಬಂದಿ ಹಾಗೂ ನೋಂದಣಿದಾರರಲ್ಲಿ ಹೊಂದಾಣಿಕೆ ಹಾಗೂ ಮಾಹಿತಿ ಕೊರತೆಯಿಂದ ಹಲವಾರು ಹೆಸರುಗಳು ಬಾಕಿ ಉಳಿದುಕೊಂಡಿವೆ. ಮಕ್ಕಳಿದ್ದಲ್ಲಿ ಕೇವಲ ಎರಡೇ ಹೆಸರುಗಳನ್ನು ದಾಖಲಿಸಬೇಕೆಂಬ ನಿಯಮವಿದೆ ಎನ್ನುತ್ತಾರಂತೆ. ಹಾಗಾದರೆ ಉಳಿದ ಮಕ್ಕಳ ಹೆಸರನ್ನು ಎಲ್ಲಿ ಸೇರಿಸುವುದು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವೊಬ್ಬರು ದುಡಿಯಲು ಪರಸ್ಥಳಕ್ಕೆ ಹೋದವರು ಅಲ್ಲಿಯೇ ಆಧಾರ್ ಕಾರ್ಡ್ ಮಾಡಿಸಿದ್ದಾರೆ. ಅಂಥವರು ಮರಳಿ ತೇರದಾಳಕ್ಕೆ ಬಂದಿದ್ದು, ಅವರಿಗೂ ನಿಮ್ಮ ದಾಖಲೆಗಳು ಬೇರೆ ಜಿಲ್ಲೆಯಗಳದ್ದು ಎಂಬ ಕಾರಣ ನೀಡಿ ತಿರಸ್ಕರಿಸಿದ್ದು ಸರಿಯೇ? ಕೆಲವೊಬ್ಬರು ಜೀವಂತವಿದ್ದರೂ ಮೃತ ಎಂದು ಬರೆದಿದ್ದು ನಮ್ಮ ಗಮನಕ್ಕೆ ಬಂದಿದೆ. ಅದನ್ನು ತಿಳಿದ ಆ ವ್ಯಕ್ತಿಯು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಸರಿಪಡಿಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇನ್ನೊಮ್ಮೆ ಸರಿಯಾಗಿ ಜಾತಿಗಣತಿ ಮಾಡಿಸಲು ಸೂಕ್ತ ಕ್ರಮ ಕೈಕೊಳ್ಳಬೇಕು. ಇದಕ್ಕೆ ದಲಿತ ಮುಖಂಡರು ಸಹ ಅವರ ಜತೆಗಿದ್ದು ಸಹಕರಿಸಲು ಸಿದ್ಧರಿದ್ದೇವೆ. ಒಟ್ಟಿನಲ್ಲಿ ಯಾರ ಹೆಸರು ಉಳಿಯಬಾರದು. ಎಲ್ಲ ದಲಿತರ ಹೆಸರುಗಳು ನೋಂದಣಿಯಾಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.

ಮುಖಂಡರಾದ ದಯಾನಂದ ಕಾಳೆ, ತುಕಾರಾಮ ಶಿಂಗೆ, ಲಕ್ಷ್ಮಣ ಹಟ್ಟೆನ್ನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net