

ರಾಯಚೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಹಲವು ದೋಷಗಳಿದ್ದು, ಸರ್ಕಾರ ಸಮೀಕ್ಷೆ ಕಾರ್ಯ ಸರಿಯಾಗಿ ನಡೆಸಬೇಕು ಎಂದು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮೀಕ್ಷೆಗೆ ಕೇವಲ 15 ದಿನ ನಿಗದಿಪಡಿಸಿದ್ದು, ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಜತೆಗೆ ಸರ್ವರ್ ಸಮಸ್ಯೆ ಹೆಚ್ಚಾಗುತ್ತಿದ್ದು, ಸಮೀಕ್ಷೆ ಮುಂದೂಡುವ ಸಾಧ್ಯತೆ ಕಾಣುತ್ತಿದೆ. ರಾಜ್ಯ ಸರ್ಕಾರ ಕ್ರಮ ಬದ್ಧ ಸಮೀಕ್ಷೆ ನಡೆಸಲು ಮುಂದಾಗಬೇಕು.
ಗಣತಿದಾರರು ಸಮೀಕ್ಷೆಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕೆಲವು ಗ್ರಾಮ, ವಾರ್ಡ್‌ಗಳಲ್ಲಿ ಈವರೆಗೂ ಸಮೀಕ್ಷೆ ನಡೆದಿಲ್ಲ ಎಂಬ ಮಾತು ಕೇಳಿಬರುತ್ತಿವೆ. ಸರ್ಕಾರ ನೀಡಿರುವ ಮನೆಗಳ ಮಾಹಿತಿಗೆ ಅನುಸಾರ ಗಣತಿದಾರರು ತೆರಳಿದಾಗ ಅಲ್ಲಿ ಮನೆಗಳೇ ಇಲ್ಲ ಎನ್ನುವುದು ಬೆಳಕಿಗೆ ಬಂದಿದೆ.
ಮಾದಿಗ ಸಮುದಾಯದವರು, ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಮಾದಿಗ ಎಂದು ನಮೂದಿಸಬೇಕು. ಗೊಂದಲಕ್ಕೆ ಒಳಗಾಗದೇ ಸರಿಯಾದ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು, ವಿದ್ಯಾವಂತ ಯುವಕರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಪ್ರಮುಖರಾದ ನರಸಪ್ಪ, ಎನ್.ಮಹಾವೀರ, ರವಿಕುಮಾರ, ಎಸ್.ರಾಜು, ರಾಮು, ರಮೇಶ, ತಿಪ್ಪಣ್ಣ, ಖಾಜಪ್ಪ ಇತರರಿದ್ದರು.