ಸಿಂಧನೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಗೆ ಸರ್ಕಾರ ನೀಡಿದ ಅವಧಿಗೂ (ಅ.7) ಒಂದು ದಿನ ಮೊದಲೇ ತಾಲೂಕು ಶೇ.100 ಸಾಧನೆ ಮಾಡಿದೆ. ಅಲ್ಲದೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ ಐದು ಸಾವಿರ ಮನೆಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ:ಶೈಕ್ಷಣಿಕ ಸಮೀಕ್ಷೆಗೆ ಮೊದಲ ದಿನವೇ ಸತ್ವ ಪರೀಕ್ಷೆ
ತಾಲೂಕಿನ 70 ಸಾವಿರ ಕುಟುಂಬಗಳನ್ನು ಸಮೀಕ್ಷೆಗೆ ಗುರುತಿಸಲಾಗಿತ್ತು. ನಿಗದಿತ ಗುರಿ ಸಾಧಿಸಿದ್ದು, ಹೆಚ್ಚುವರಿ 5 ಸಾವಿರ ಕುಟುಂಬಗಳು ಸಮೀಕ್ಷೆ ವೇಳೆ ಬೆಳಕಿಗೆ ಬಂದಿವೆ. ಅಲೆಮಾರಿ ಮತ್ತು ನಿರಾಶ್ರಿತ ಕುಟುಂಬಗಳು ಉಳಿದಿದ್ದರೆ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ತಹಸೀಲ್ದಾರ್ ಅರುಣ್ ದೇಸಾಯಿ ಸೂಚಿಸಿದ್ದರಿಂದ ಮತ್ತೊಮ್ಮೆ ವಿವಿಧೆಡೆ ಸಂಚರಿಸಿದಾಗ 5 ಹೆಚ್ಚುವರಿ ಮನೆಗಳು ಪತ್ತೆಯಾಗಿವೆ. ಸತತ 19 ದಿನಗಳ ಸಮೀಕ್ಷೆ ನಡೆಸಿ, ಕುಟುಂಬಗಳ ಮಾಹಿತಿ ಪಡೆದಿರುವ ಗಣತಿದಾರರು ನಿರುಮ್ಮಳವಾಗಿದ್ದಾರೆ. ಬಿಸಿಲಿನ ತಾಪಮಾನದ ನಡುವೆಯೇ ಸಮೀಕ್ಷೆ ನಡೆಸುವುದು ಗಣತಿದಾರರಿಗೆ ಸವಾಲಾಗಿತ್ತು. ವಹಿಸಿದ್ದ ಕೆಲಸವನ್ನು ಗಣತಿದಾರರು ಒಂದು ದಿನ ಮುಂಚಿತವಾಗಿಯೇ ಪೂರ್ಣಗೊಳಿಸಿದ್ದಾರೆ.
ತಾಲೂಕಿನ 33 ಮೇಲ್ವಿಚಾರಕರು, 61 ಗಣತಿದಾರರ ಸಭೆಯನ್ನು ಬುಧವಾರ ನಡೆಸಲಾಗಿದೆ. ತಮ್ಮ ವ್ಯಾಪ್ತಿಯಲ್ಲಿನ ಗಣತಿಯ ವರದಿ ಮತ್ತು ಬ್ಲಾಕ್ ನಕ್ಷೆಗಳನ್ನು ಒಪ್ಪಿಸಲು ಮೇಲ್ವಿಚಾರಕರಿಗೆ ಸೂಚಿಸಲಾಗಿದೆ. ಕಚೇರಿಗೆ ಸಲ್ಲಿಸಿರುವ ಸಮೀಕ್ಷೆ ಫಾರ್ಮ್‌ಗಳನ್ನು ಬ್ಲಾಕ್‌ವಾರು ಜೋಡಿಸಲಾಗಿದ್ದು, ಡಿಜಿಟಲೀಕರಣ ಮಾಡಲಾಗುತ್ತಿದೆ. ಗಣತಿದಾರರಿಂದ ಪಡೆದ ಭರ್ತಿ ಫಾರ್ಮ್‌ಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗಿದೆ. ಗಣನೀಯ ತಪ್ಪುಗಳು ಕಂಡುಬಂದಿಲ್ಲ ಎನ್ನಲಾಗಿದೆ.
ಮತ್ತೆ ಸರ್ವೇ ಮಾಡಲು ಸೂಚನೆ ಈಗಾಗಲೇ ನಿಗದಿಪಡಿಸಿದಂತೆ 70 ಸಾವಿರ ಮನೆಗಳಲ್ಲದೆ, 5 ಸಾವಿರ ಹೆಚ್ಚುವರಿ ಮನೆಗಳಲ್ಲಿ ಸಮೀಕ್ಷೆ ನಡೆಸಿ, ಜಿಲ್ಲಾಧಿಕಾರಿಗಳಿಂದ ಪ್ರಶಂಸೆ ಪಡೆದುಕೊಳ್ಳಲಾಗಿತ್ತು. ಕೆಲವೆಡೆ ಬೀಗ ಹಾಕಿರುವ, ಖಾಲಿ ಮನೆ ಸೇರಿದಂತೆ ಇನ್ನೂ 10 ಸಾವಿರ ಮನೆಗಳಲ್ಲಿ ಗಣತಿ ಮಾಡಲು ಸೂಚಿಸಲಾಗಿದೆ. ಅ.18ವರೆಗೆ ಸಮಯ ನೀಡಲಾಗಿದ್ದು, ಗುರುವಾರದಿಂದ ಸರ್ವೇ ಕಾರ್ಯ ಆರಂಭವಾಗಿದೆ.