

ಧಾರವಾಡ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾ.ಪಂ. ಚುನಾವಣೆ ರಂಗೇರಿದೆ. ಶನಿವಾರ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಕ್ತಾಯವಾಗಿದ್ದು, ಹಳ್ಳಿಗಳಲ್ಲೀಗ ಗೆಲುವಿಗಾಗಿ ವಿವಿಧ ತಂತ್ರಗಳು ಜೋರಾಗಿ ನಡೆಯುತ್ತಿವೆ.
ಧಾರವಾಡ ತಾಲೂಕಿನ 34, ಅಳ್ನಾವರ ತಾಲೂಕಿನ 4 ಹಾಗೂ ಕಲಘಟಗಿ ತಾಲೂಕಿನ 27 ಪಂಚಾಯಿತಿಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿ. 14ರವರೆಗೆ ನಾಮಪತ್ರಗಳನ್ನು ವಾಪಸ್ ಪಡೆಯಲು ಕಾಲಾವಕಾಶ ಇದೆ. ಹೀಗಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಒತ್ತಡದ ತಂತ್ರಗಾರಿಕೆ ನಡೆಯುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಗ್ರಾ.ಪಂ. ಚುನಾವಣೆಯನ್ನು ತರಾತುರಿಯಲ್ಲಿ ನಡೆಸಲಾಗುತ್ತಿದೆ. ಡಿ. 22ರಂದು ಮೊದಲ ಹಂತದ ಪಂಚಾಯಿತಿಗಳಿಗೆ ಮತದಾನ ಜರುಗಲಿದೆ. ಪ್ರಚಾರಕ್ಕೆ ಕಡಿಮೆ ಕಾಲಾವಕಾಶವಿದೆ. ಹೀಗಾಗಿ ಚುನಾವಣೆ ನಡೆಸದೆ ಅವಿರೋಧ ಆಯ್ಕೆಗಾಗಿ ಪ್ರಭಾವಿಗಳು ಕಸರತ್ತು ನಡೆಸುತ್ತಿದ್ದಾರೆ.
* ಜಾತಿ ಲೆಕ್ಕಾಚಾರ: ಸಾಮಾನ್ಯ, ಸಾಮಾನ್ಯ ಮಹಿಳೆ, ಪ.ಜಾ., ಪ.ಪಂ., ಹಿಂದುಳಿದ ಅ, ಬ ವರ್ಗ ಸೇರಿದಂತೆ ವಿವಿಧ ಮೀಸಲಾತಿಯಡಿ ಆಕಾಂಕ್ಷಿಗಳು ಸ್ಪರ್ಧಿಸಿದ್ದಾರೆ. ಧುರೀಣರು ಮತದಾರರನ್ನು ಸೆಳೆಯಲು ಜಾತಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಗ್ರಾಮದ ಹಿರಿಯರು, ಮುಖಂಡರು ಹಾಗೂ ಮಠಾಧೀಶರಿಂದ ತಮಗೇ ಮತ ಹಾಕಿಸುವಂತೆ ದುಂಬಾಲು ಬಿದ್ದಿದ್ದಾರೆ. ಡಿ. 14ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅಲ್ಲಿಯವರೆಗೆ ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ.
ಊಟೋಪಚಾರ ಜೋರು: ಸೋಮವಾರ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ವಾಪಸ್ ಪಡೆಯಲು ಸಮಯಾವಕಾಶವಿದ್ದು, ನಂತರ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ನಂತರವೇ ವಾರ್ಡ್ವಾರು ಚಿತ್ರಣ ಗೊತ್ತಾಗಲಿದೆ. ಅಲ್ಲಿಯವರೆಗೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳಿಂದ ಊಟೋಪಚಾರದ ವ್ಯವಸ್ಥೆ ಜೋರಾಗಿದೆ. ಗ್ರಾಮದ ಹೋಟೆಲ್ಗಳು, ಹೊರವಲಯದ ಢಾಬಾಗಳಲ್ಲಿ ಗುಂಡು- ತುಂಡಿನ ಬೈಠಕ್ಗಳನ್ನು ಆಯೋಜಿಸಿ ಚುನಾವಣಾ ಲೆಕ್ಕಾಚಾರ ಹಾಕಲಾಗುತ್ತಿದೆ.
ಸಂಬಂಧಿಕರಲ್ಲೂ ಸ್ಪರ್ಧೆ: ಗ್ರಾ.ಪಂ. ಚುನಾವಣೆ ಸೀಮಿತ ವಿಸ್ತಾರ ಹೊಂದಿರುವುದು ಸಾಮಾನ್ಯ. ಓಣಿಗಳನ್ನೇ ವಾರ್ಡ್ಗಳಾಗಿ ವಿಂಗಡಿಸಲಾಗಿದೆ. ಹೀಗಾಗಿ ಕೆಲವೆಡೆ ಕೂಡು ಕುಟುಂಬದವರು, ದಾಯಾದಿಗಳು, ಸಂಬಂಧಿಕರಲ್ಲೂ ಸ್ಪರ್ಧೆ ನಡೆಯುತ್ತಿದೆ. ರಾಜಕೀಯ ಜೀವನದ ಮೆಟ್ಟಿಲು ಎಂದೇ ಪರಿಗಣಿಸಲ್ಪಡುವ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅದೃಷ್ಟ ಪರೀಕ್ಷಿಸುವ ಸಲುವಾಗಿ ಹಲವರು ಕಣಕ್ಕಿಳಿದಿದ್ದಾರೆ.
ಅಭ್ಯರ್ಥಿಗಳಿಗೆ ಚಿಹ್ನೆಗಳು: ಗ್ರಾ.ಪಂ. ಚುನಾವಣೆ ಪಕ್ಷಾತೀತವಾಗಿದ್ದು, ಪ್ರಾದೇಶಿಕ, ರಾಷ್ಟ್ರೀಯ ಪಕ್ಷಗಳ ಚಿಹ್ನೆಗಳನ್ನು ಹೊರತುಪಡಿಸಿ ವಿವಿಧ ಚಿಹ್ನೆಗಳನ್ನು ನಿಗದಿಪಡಿಸಲಾಗಿದೆ. ಮುಖ್ಯವಾಗಿ ಅಲ್ಮೇರಾ, ಆಟೋ ರಿಕ್ಷಾ, ಬಲೂನ್, ಬ್ಯಾಟ್, ಬ್ಯಾಟ್ಸ್ಮನ್, ಬಳೆಗಳು, ಟಾರ್ಚ್, ಮುತ್ತಿನಹಾರ, ಬಿಸ್ಕೆಟ್, ಬ್ರೆಡ್, ಕಪು್ಪಹಲಗೆ, ಬೆಂಚ್, ಲಾಳಿಕೆ, ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟೌ, ಗಾಜಿನ ಲೋಟ, ದ್ರಾಕ್ಷಿ ಗೊಂಚಲು, ಟೊಪ್ಪಿಗೆ, ಹೆಲ್ಮೆಟ್, ಬೆಂಡೆ ಕಾಯಿ, ಇಸ್ತ್ರಿ ಪೆಟ್ಟಿಗೆ, ಅಂಚೆಪೆಟ್ಟಿಗೆ ಸೇರಿದಂತೆ ವಿವಿಧ ಚಿಹ್ನೆಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ 3 ಚಿಹ್ನೆಗಳಿಗೆ ಪ್ರಾಶಸ್ಱ ನೀಡಿ ನಮೂದಿಸಿದ್ದಾರೆ. ಮತಪತ್ರದಲ್ಲಿ ವರ್ಣಮಾಲೆಯ ಹೆಸರಿಗೆ ಅನುಗುಣವಾಗಿ ಅಭ್ಯರ್ಥಿಗಳ ಕೋರಿಕೆಯಂತೆ ಚಿಹ್ನೆಗಳ ಹಂಚಿಕೆಯಾಗಲಿದೆ.
ಈವರೆಗೆ ನಾಮಪತ್ರ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ ಕಾರ್ಯ ಶಾಂತಿಯುತವಾಗಿ ನಡೆದಿದೆ. ಕೋವಿಡ್ ಮಧ್ಯೆಯೂ ನಿಯೋಜಿತ ಚುನಾವಣಾ ಸಿಬ್ಬಂದಿ, ಪಿಡಿಒ ಹಾಗೂ ಗ್ರಾ.ಪಂ. ಸಿಬ್ಬಂದಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದ ನಂತರ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಲಾಗುವುದು.| ಎ.ಎ. ಖಾಜಿ, ನರೇಂದ್ರ ಗ್ರಾ.ಪಂ. ಚುನಾವಣಾಧಿಕಾರಿ