

ಸಿಂಧನೂರು: ಭಾವಲೋಕದ ಕವಿ ಎಂದೇ ಹೆಸರು ಪಡೆದಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರು ಎಂದು ವಕೀಲ ಪ್ರಹ್ಲಾದ ಗುಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸಂಜೆ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ಭಾವ ಕವಿ ಎಚ್.ಎಸ್.ವೆಂಕಟೇಶಮೂರ್ತಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ ಮುಕ್ತ ಧಾರಾವಾಹಿಯ ಶೀರ್ಷಿಕೆ ಗೀತೆ, ಮಣ್ಣ ತಿಂದು ಸವಿ ಹಣ್ಣು ಕೊಡುವ ಮರ ನೀನು ಮುಕ್ತ ಮುಕ್ತ ಮುಕ್ತ ಎಂಬ ಹಾಡು ಜನ ಮಾನಸದಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ.
ಸಾಹಿತಿಗಳು, ಕವಿಗಳು, ಬರಹಗಾರರಿಗೆ ಜಾತಿ ಇರಬಾರದು. ಜಾತಿ ಮೀರಿದವರೇ ಜಗತ್ತಿಗೆ ಪ್ರೀತಿಯಾಗುತ್ತಾರೆ.ಅಂತಹ ಪ್ರೀತಿಯ ಸಾಲಿನಲ್ಲಿ ಭಾವಕವಿ ಎಚ್ಚೆಸ್ವಿ ಒಬ್ಬರಾಗಿದ್ದಾರೆ ಎಂದರು. ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ.
ಅವರ ಮಕ್ಕಳ ಸಾಹಿತ್ಯ, ವಿಮರ್ಶೆ ಸಾಹಿತ್ಯ, ಎಂದಿಗೂ ಮರೆಯಲಾಗದು. ಅವರೊಬ್ಬ ಅಪರೂಪದ ವಿಶಿಷ್ಟ ಕವಿಯಾಗಿದ್ದರು ಎಂದು ಬಣ್ಣಿಸಿದರು. ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ವೆಂಕಣ್ಣ ಆಚಾರ್ಯ ದೋಟಿಹಾಳ, ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕೃಷ್ಣ ಮಲಕಸಮುದ್ರ.
ಸಂಕೇತ್ ಕಾಲೇಜ್ ಪ್ರಾಚಾರ್ಯ ವಿಶ್ವನಾಥ ಪತ್ತಾರ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಗೋವಿಂದರಾವ ಕುಲಕರ್ಣಿ, ಸಾಹಿತಿ ಶರಭಂದ್ರಯ್ಯಸ್ವಾಮಿ ಹಿರೇಮಠ, ಪ್ರಮುಖರಾದ ಬಷೀರ್ ಯತ್ಮಾರಿ, ಗುಂಡೂರಾವ್ ಚನ್ನಳ್ಳಿ, ರಾಘವೇಂದ್ರ ರಾವ್ ಕುಲಕರ್ಣಿ, ಹನುಮಂತ ಆಚಾರ್ ಮಸ್ಕಿ, ನಾರಾಯಣಾಚಾರ್ಯ ಜೋಶಿ, ಭೀಮಸೇನಾಚಾರ್ ಪುರೋಹಿತ್, ದಿನೇಶ್ ಹೆಬ್ಬಾಳ, ಪ್ರಭಾಕರ ಕುಲಕರ್ಣಿ ಇದ್ದರು.