

| ಪರಶುರಾಮ ಭಾಸಗಿ ವಿಜಯಪುರ
ಸಿಂದಗಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಎರಡನೇ ಸುತ್ತಿನ ಪ್ರಚಾರ ಜೋರಾಗಿದ್ದು, ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದರೂ ಜೆಡಿಎಸ್ ಕೂಡ ಪೈಪೋಟಿ ಒಡ್ಡಿದೆ. ಮೊದಲ ಸುತ್ತಿನಲ್ಲಿ ಸಭೆ, ಸಮಾರಂಭ ಹಾಗೂ ಬಹಿರಂಗ ಸಮಾವೇಶಗಳಿಗೆ ಆದ್ಯತೆ ನೀಡಿದ್ದ ಬಿಜೆಪಿ ಇದೀಗ ರೋಡ್ಶೋ, ಬೈಕ್ ರ‍್ಯಾಲಿ ಮತ್ತಿತರ ಪ್ರಚಾರ ತಂತ್ರಗಳ ಮೊರೆ ಹೋಗಿದೆ. ಕಾಂಗ್ರೆಸ್ ಜಾತಿ ಆಧಾರಿತ ಸಮಾವೇಶಗಳಿಗೆ ಮುನ್ನುಡಿ ಬರೆದರೆ, ಜೆಡಿಎಸ್ ನೇರವಾಗಿ ಮತದಾರರ ಮನೆ ಬಾಗಿಲಿಗೆ ಹೋಗುತ್ತಿದೆ. ಕೆಆರ್ಎಸ್ ಪಕ್ಷ ಗ್ರಾಮೀಣ ಭಾಗಗಳಲ್ಲಿ ಕಾರ್ಯಾಚರಣೆಗಿಳಿದಿದೆ. ನಿರ್ಣಾಯಕ ಎನಿಸಿರುವ ತಳವಾರ ಮತ್ತು ಪರಿವಾರ, ಹಾಲುಮತ, ದಲಿತ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ-ಕಾಂಗ್ರೆಸ್ ಪೈಪೋಟಿಗಿಳಿದಿವೆ. ಮಾಜಿ ಶಾಸಕ ಶರಣಪ್ಪ ಸುಣಗಾರ ನೇತೃತ್ವದಲ್ಲಿ ಕಾಂಗ್ರೆಸ್ ತಳವಾರ ಸಮುದಾಯದ ಸ್ವಾಭಿಮಾನಿ ಸಮಾವೇಶ ಏರ್ಪಡಿಸಿ ಕಾಂಗ್ರೆಸ್ಗೆ ಮತ ಹಾಕಲು ಪ್ರತಿಜ್ಞಾ ವಿಧಿ ಸ್ವೀಕರಿಸಿದೆ. ಬಿಜೆಪಿ ಭಗೀರಥ ಸಮಾಜದ ಸಭೆ ನಡೆಸಿದ್ದು, ಇನ್ನುಳಿದ ಸಮುದಾಯದ ಮುಖಂಡರನ್ನು ಕರೆದು ಆಂತರಿಕವಾಗಿ ಸಭೆ ನಡೆಸುತ್ತಿದೆ. ತಳವಾರ-ಪರಿವಾರ ಸಮುದಾಯಕ್ಕೆ ಸಿಗಬೇಕಿದ್ದ ಎಸ್ಟಿ ಪ್ರಮಾಣ ಪತ್ರವನ್ನಿಟ್ಟುಕೊಂಡು ಎರಡೂ ಪಕ್ಷ ಗಳು ಕಾದಾಟಕ್ಕಿಳಿದಿವೆ. ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಜಾತಿ ಪ್ರಮಾಣ ಪತ್ರ ನೀಡುವ ವಾಗ್ದಾನ ಮಾಡಿದರೆ, ಸಿಎಂ ಬಸವರಾಜ ಬೊಮ್ಮಾಯಿ ಚುನಾವಣೆ ಮುಗಿಯುತ್ತಿದ್ದಂತೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.
ಸಿಂದಗಿಯಲ್ಲಿ ಬಿಜೆಪಿ ಅಲೆ ಇದೆ. ಹಳ್ಳಿಗಳಿಗೆ ಭೇಟಿ ನೀಡಿದಾಗ ಬಿಜೆಪಿ ಪರ ದೊಡ್ಡ ಪ್ರಮಾಣದ ಸುನಾಮಿ ಇರೋದು ಗೊತ್ತಾಗಿದೆ. ಬಿಜೆಪಿ ಅಭ್ಯರ್ಥಿ 18ರಿಂದ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. | ಲಕ್ಷ್ಮಣ ಸವದಿ ಮಾಜಿ ಡಿಸಿಎಂ
ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಾಲುಮತ ಸಮುದಾಯದ ಮತ ಕಬಳಿಸಲು ಎರಡೂ ಪಕ್ಷಗಳು ಆಯಾ ಸಮುದಾಯದ ಮುಖಂಡರನ್ನು ಅಖಾಡಕ್ಕಿಳಿಸಿವೆ. ಸಚಿವರಾದ ಎಂಟಿಬಿ ನಾಗರಾಜ, ಕೆ.ಎಸ್.ಈಶ್ವರಪ್ಪ, ಭೈರತಿ ಬಸವರಾಜ ಮತ್ತಿತರರು ಬಿಜೆಪಿಯಿಂದ ಕಾರ್ಯಾಚರಣೆಗಿಳಿದರೆ, ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಕಣಕ್ಕಿಳಿದಿದ್ದಾರೆ. ಮಾಜಿ ಸಚಿವ ಎಚ್.ಎಂ.ರೇವಣ್ಣ ಕೂಡ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಸಿಎಂ ಬೊಮ್ಮಾಯಿ ಸಹ ಕಂಬಳಿ ಹೊದ್ದುಕೊಳ್ಳುವ ಮೂಲಕ ಹಾಲುಮತ ಸಮುದಾಯದ ಆಕರ್ಷಣೆಗೆ ಒಳಗಾಗಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಿಂದಗಿ ಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಇಡೀ ಕುಟುಂಬ ಭೀಮಾತೀರದಲ್ಲಿ ಬೀಡು ಬಿಟ್ಟಿದೆ. ಎಚ್.ಡಿ.ರೇವಣ್ಣ, ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಕ್ಷೇತ್ರದಲ್ಲೇ ಮುಕ್ಕಾಂ ಹೂಡಿದ್ದು ಜೆಡಿಎಸ್ ಬಲ ಹೆಚ್ಚಿಸಿದೆ. ಶಾಸಕ ದೇವಾನಂದ ಚವ್ಹಾಣ್, ಬಿ.ಡಿ.ಪಾಟೀಲ, ಅಫಜಲಪುರದ ಮುಖಂಡ ಶಿವಕುಮಾರ ನಾಟೀಕಾರ ಮತ್ತಿತರ ಶ್ರಮ ಫಲಕೊಡುತ್ತಿದೆ.
ಬಿ.ಎಸ್.ಯಡಿಯೂರಪ್ಪ ಬಂದುಹೋದ ಬಳಿಕ ಕ್ಷೇತ್ರದಲ್ಲಿ ಬಿಜೆಪಿ ಅಲೆ ಹೆಚ್ಚಾಗಿದೆ. ಮೋರಟಗಿ, ಗೋಲಗೇರಿ ಭಾಗದಲ್ಲಿ ಬಹಿರಂಗ ಸಮಾವೇಶ ನಡೆಸಿದ ಯಡಿಯೂರಪ್ಪ ತಮ್ಮ ಪ್ರಬುದ್ಧ ಭಾಷಣದ ಮೂಲಕ ಸರ್ವ ಸಮಾಜಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಲ್ಲದೆ, ಬಿಜೆಪಿ ಅವಧಿಯಲ್ಲಾದ ಅಭಿ ವೃದ್ಧಿ ಕಾರ್ಯಗಳನ್ನು ಮನದಟ್ಟು ಮಾಡಿದರು. ಯಡಿಯೂರಪ್ಪ ಹೋದ ಬೆನ್ನಲ್ಲೇ ವಿಜಯೇಂದ್ರ ಆಗಮನ ಸಹ ಬದಲಾವಣೆ ಗಾಳಿ ಬೀಸುವಂತೆ ಮಾಡಿತು. ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ಗ್ರಾಮೀಣ ಭಾಗಗಳಲ್ಲಿ ಹಮ್ಮಿಕೊಂಡ ರೋಡ್ಶೋ ಬಿಜೆಪಿಯ ಹವಾ ಹೆಚ್ಚಿಸಿದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕ್ಷೇತ್ರದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರಾದರೂ ಪಕ್ಷಕ್ಕೆ ಹೆಚ್ಚಿನ ಮತ ತರುವ ಮಟ್ಟಕ್ಕೆ ಸಫಲವಾಗಿಲ್ಲ. ಬದಲಾಗಿ ಜಿಲ್ಲೆಯವರೇ ಆದ ಶಾಸಕ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ಹಾಗೂ ಎಂ.ಬಿ.ಪಾಟೀಲರ ಆಂತರಿಕ ಕಾರ್ಯಾಚರಣೆ ಹೆಚ್ಚಿನ ಕೆಲಸ ಮಾಡುತ್ತಿದೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಹಳ್ಳಿ ಹಳ್ಳಿ ಸುತ್ತುತ್ತಿರುವ ಈ ಪಾಟೀಲತ್ರಯರ ತಂತ್ರಗಾರಿಕೆ ಪಕ್ಷಕ್ಕೆ ಹೆಚ್ಚಿನ ಫಲ ನೀಡುತ್ತಿದೆ. ವಿಪ ಸದಸ್ಯ ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ ಮತ್ತಿತರ ಮುಖಂಡರ ಶ್ರಮ ಫಲಕೊಡುತ್ತಿದೆ.
ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿ ‘ಒಳಹೊಡೆತ’ ಜೋರಾಗಿದೆ. ಹೊರಗಿನಿಂದ ಬಂದ ನಾಯಕರು ಪ್ರಾಮಾಣಿಕವಾಗಿ, ಜವಾಬ್ದಾರಿ ತೆಗೆದುಕೊಂಡು ಚುನಾವಣೆ ಎದುರಿಸುತ್ತಿದ್ದರೆ ಸ್ಥಳೀಯ ನಾಯಕರು ಒಳಗೊಳಗೆ ಕುತಂತ್ರ ನಡೆಸುತ್ತಿರುವುದು ಎರಡೂ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಟಿಕೆಟ್ ವಂಚಿತರು, ಭಾವಿ ನಾಯಕರು ಒಳಗೊಳಗೆ ತಮ್ಮದೇ ಅಭ್ಯರ್ಥಿಯ ಸೋಲಿಗೆ ಎದುರಾಳಿಗಳೊಂದಿಗೆ ಕೈ ಮಿಲಾಯಿಸುತ್ತಿದ್ದಾರೆ. ಸದರಿ ಅಭ್ಯರ್ಥಿಗಳು ಪರಾಭವಗೊಂಡರೆ ಮುಂದಿನ ಚುನಾವಣೆಯಲ್ಲಿ ತಮಗೆ ಅವಕಾಶ ಸಿಗಬಹುದೆಂಬ ಲೆಕ್ಕಾಚಾರ ಈ ನಾಯಕರಲಿದೆ.
ಜೆಡಿಎಸ್ ಕೇವಲ ಅಲ್ಪಸಂಖ್ಯಾತ ಸಮುದಾಯ ಹಾಗೂ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನಿಟ್ಟು ಕೊಂಡು ಮತಬೇಟೆಯಾಡುತ್ತಿದ್ದು, ಜಾತಿ-ಧರ್ವಧಾರಿತ ಸಭೆ ಸಮಾರಂಭಗಳಿಂದ ದೂರವಿದೆ. ಕಾಂಗ್ರೆಸ್ನ ಜಮೀರ್ ಅಹ್ಮದ್, ಯು.ಟಿ.ಖಾದರ್ ತಮ್ಮ ಸಮುದಾಯದ ಮತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸದ್ಯಕ್ಕೆ ಶೇ.70 ಅಲ್ಪಸಂಖ್ಯಾತರು ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಬಿಜೆಪಿ ಕೂಡ ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದು, ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಬಿಜೆಪಿ ಹಿಂದು-ಮುಸ್ಲಿಂ-ಕ್ರೖೆಸ್ತ ಎಂದು ನೋಡದೆ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ನೋಡಿಕೊಂಡಿದೆ ಎಂದಿದ್ದಾರೆ. ದಲಿತ ಮತಗಳನ್ನು ಸೆಳೆಯಲು ಬಿಜೆಪಿ, ಸಚಿವ ಗೋವಿಂದ ಕಾರಜೋಳ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರನ್ನು ಹೆಚ್ಚಾಗಿ ಬಳಸಿಕೊಂಡರೆ ಕಾಂಗ್ರೆಸ್ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ಎಚ್.ಆಂಜನೇಯ, ಎಚ್.ಸಿ.ಮಹಾದೇವಪ್ಪ, ಆರ್.ಬಿ. ತಿಮ್ಮಾಪುರ, ಧ್ರುವನಾರಾಯಣ, ಪರಮೇಶ್ವರ ನಾಯಕ ಮತ್ತಿತರ ಘಟಾನುಘಟಿಗಳನ್ನು ಅಖಾಡಕ್ಕಿಳಿಸಿದೆ. ಒಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು, ಸರ್ಕಾರಿ ಯೋಜನೆಗಳು, ಸಾಧನೆಗಳಿಗಿಂತ ಹೆಚ್ಚಾಗಿ ಜಾತಿ-ಧರ್ಮಗಳೇ ಪ್ರಚಾರದ ವಸ್ತುಗಳಾಗಿದ್ದು, ಅದೇ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಆಗಾಗ ಬೆಲೆ ಏರಿಕೆ, ಆರ್ಎಸ್ಎಸ್ ಬಗ್ಗೆ ಮಾತನಾಡಿದರೆ, ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಮುಂದಿಟ್ಟುಕೊಂಡು ಮತಯಾಚಿಸುತ್ತಿದೆ. ಜೆಡಿಎಸ್ಗೂ ಆರ್ಎಸ್ಎಸ್ ಪ್ರಚಾರದ ವಸ್ತುವಾಗಿದೆ.