ಜಾತಿ ನಿಂದನೆ ಮಾಡಿದ ಆರೋಪಿಯ ಬಂಧನಕ್ಕೆ ಆಗ್ರಹ

madival web
Published on

ದಾವಣಗೆರೆ: ಕೆಲ ಸಮುದಾಯಗಳನ್ನೆ ಗುರಿಯಾಗಿಟ್ಟುಕೊಂಡು ಜಾತಿ ನಿಂದನೆ ಮಾಡಿ, ಅತ್ಯಾಚಾರಕ್ಕೆ ಪ್ರಚೋದಿಸುವ ಹೇಳಿಕೆ ನೀಡಿದ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಹಾಗೂ ಜಿಲ್ಲಾ ಮಡಿಕಟ್ಟೆ (ಧೋಬಿಘಾಟ್) ಮಡಿವಾಳರ ಸಂಘದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಜಯದೇವ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಪಿಬಿ ರಸ್ತೆಯಲ್ಲಿ ಸಾಗಿ ನಗರ ಡಿವೈಎಸ್ಪಿ ನಾಗೇಶ್ ಐತಾಳ್ ಅವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಇಬ್ಬರು ವ್ಯಕ್ತಿಗಳ ದೂರವಾಣಿ ಸಂಭಾಷಣೆಯು ವಾಟ್ಸಾಪ್‌ನಲ್ಲಿ ಹರಿಬಿಡಲಾಗಿದೆ. ಅವಾಚ್ಯ ಶಬ್ದಗಳನ್ನು ಬಳಸಲಾಗಿದೆ ಎಂದು ತಿಳಿಸಿದರು.

ಸಮಾಜದ ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ್ ಮಾತನಾಡಿ, ಆರೋಪಿಯನ್ನು 10 ವರ್ಷಗಳ ಕಾಲ ರಾಜ್ಯದಿಂದ ಗಡಿಪಾರು ಮಾಡಬೇಕು. ಯಾವುದೇ ಸಮಾಜದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ಹೇಳಿಕೆಗಳು ಬಂದರೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಆರೋಪಿತರನ್ನು ಬಂಧಿಸಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮಾಜದ ಮುಖಂಡರಾದ ಆರ್.ಎನ್. ಧನಂಜಯ, ವಿಜಯಕುಮಾರ್, ಫೋಟೋ ಮಂಜುನಾಥ್, ಸುರೇಶ್ ಕೋಗುಂಡೆ, ಎಂ.ವೈ. ಸತೀಶ್, ಅಂಜಿನಪ್ಪ ನಿಟುವಳ್ಳಿ, ರುದ್ರೇಶ್, ವೇಣುಗೋಪಾಲ್, ಕಿಶೋರ್‌ಕುಮಾರ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net