ನಗದುರಹಿತ ಚಿಕಿತ್ಸೆ ಶೀಘ್ರ ಜಾರಿ ; ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮಾಹಿತಿ

14 mdg 02
Published on

ಮಧುಗಿರಿ: ಸರ್ಕಾರಿ ನೌಕರರಿಗೆ ಏ.1ರಿಂದ ನಗದುರಹಿತ ಉಚಿತ ಚಿಕಿತ್ಸಾ ಯೋಜನೆಯನ್ನು 1,500 ಕೋಟಿ ರೂ.ವೆಚ್ಚದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾರಿಗೊಳಿಸಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಪಟ್ಟಣ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ಘಟಕ ಏರ್ಪಡಿಸಿದ್ದ ಸರ್ಕಾರಿ ನೌಕರರ ಸಂವಾದ ಮತ್ತು ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯೋಜನೆಯಡಿ ಎಲ್ಲ ರೋಗಗಳಿಗೂ 50 ಲಕ್ಷ ರೂ.ವರೆಗೂ ನರ್ಸಿಂಗ್ ಹೋಂ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನಗದುರಹಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆಯು ದೇಶದಲ್ಲೇ ಮೊದಲ ಬಾರಿಗೆ ಜಾರಿಯಾಗಲಿದೆ. 2022ರ ವೇಳೆಗೆ ಆನ್‌ಲೈನ್ ಮೂಲಕ ಪೆನ್ಷನ್, ಕೆಜಿಐಡಿ ಪಾಲಿಸಿ ಗಣಕೀಕರಣಗೊಳಿಸುವ ಕೆಲಸ ಪೂರ್ಣಗೊಂಡಿದೆ ಎಂದರು. ಪ್ರಸ್ತುತ ಕೇಂದ್ರ ಸಂಘವು 9.7 ಕೋಟಿ ರೂ. ಆದಾಯದಲ್ಲಿದ್ದು,11 ಕೋಟಿ ರೂ. ಠೇವಣಿ ಇಡಲಾಗಿದೆ ಎಂದು ವಿವರಿಸಿದರು.

2.5ಲಕ್ಷ ರೂ.ಮೊತ್ತದ ಸದಸ್ಯತ್ವ ಶುಲ್ಕದ ಚೆಕ್ ಅನ್ನು ತಾಲೂಕು ಘಟಕಕ್ಕೆ ನೀಡಲಾಯಿತು. ತಾಲೂಕು ಘಟಕ ಗೌರವಾಧ್ಯಕ್ಷ ಜಿ.ಜಯರಾಮಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಎನ್.ನಟರಾಜು, ರಾಜ್ಯ ಪರಿಷತ್ ಸದಸ್ಯ ಎಂ.ಎನ್.ಶಿವಕುಮಾರ್, ಖಜಾಂಚಿ ಪಿ.ಚಿಕ್ಕರಂಗಪ್ಪ, ಪದವೀಧರ ಶಿಕ್ಷಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್.ಮಹಾಲಿಂಗೇಶ್, ಡಿಡಿಪಿಐ ಎಂ.ರೇವಣಸಿದ್ದಪ್ಪ, ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ತಾಪಂ ಇಒ ದೊಡ್ಡ ಸಿದ್ದಪ್ಪ, ಕೃಷಿ ಇಲಾಖೆ ನಿರ್ದೇಶಕ ಹನುಮಂತರಾಯಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮ್ನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಶಿವಾನಂದ, ಕೊರಟಗೆರೆ ಅಧ್ಯಕ್ಷ ರುದ್ರೇಶ್, ಶಿರಾ ಅಧ್ಯಕ್ಷ ಪಿ.ಎಂ.ಲಕ್ಷ್ಮೀಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶೈಕ್ಷಣಿಕ ಜಿಲ್ಲಾಧ್ಯಕ್ಷ ಅನಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net