ಬಿಯರ್ ಮಗ್‌ನಿಂದ ಇರಿದು ಕ್ಯಾಷಿಯರ್ ಕೊಲೆ

22Kush01
ಕುಶಾಲನಗರದ ಹೃದಯ ಭಾಗದಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಭಾನುವಾರ ರಾತ್ರಿ ಕೊಲೆ ನಡೆದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
Published on

ಕುಶಾಲನಗರ: ಪಟ್ಟಣದಲ್ಲಿ ಭಾನುವಾರ ತಡರಾತ್ರಿ ವ್ಯಕ್ತಿಯೊಬ್ಬ ಹೋಟೆಲ್ ಕ್ಯಾಷಿಯರ್‌ಗೆ ಬಿಯರ್ ಮಗ್‌ನಿಂದ ಇರಿದು ಹತ್ಯೆ ಮಾಡಿದ್ದಾನೆ.

ಪಟ್ಟಣದ ಹೃದಯ ಭಾಗದಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್‌ವೊಂದರಲ್ಲಿ ಭಾನುವಾರ ರಾತ್ರಿ ಈ ಕೃತ್ಯ ನಡೆದಿದ್ದು, ಕ್ಯಾಷಿಯರ್ ಸಂತೋಷ್ (40) ಕೊಲೆಯಾದವರು. ಜನತಾ ಕಾಲನಿ ನಿವಾಸಿ ಹರ್ಷ ಎಂಬಾತ ಕಂಠಪೂರ್ತಿ ಕುಡಿದು, ಅಮಲಿನಲ್ಲಿ ಕ್ಯಾಷಿಯರ್ ಸಂತೋಷ್ ಜತೆ ವಿನಾ ಕಾರಣ ಜಗಳ ಮಾಡಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇದರಿಂದ ಕುಪಿತಗೊಂಡ ಹರ್ಷ ಬಿಯರ್ ಮಗ್‌ನಿಂದ ಸಂತೋಷ್ ತಲೆ ಮತ್ತು ಕುತ್ತಿಗೆಗೆ ಬಲವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಗಾಯಳು ಸಂತೋಷ್ ಮೃತಪಟ್ಟಿದ್ದಾನೆ.

ಕೂಡಲೇ ಹೋಟೆಲ್ ಮಾಲೀಕ ತನ್ನ ಕಾರಿನಲ್ಲಿ ಸಂತೋಷನನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಆರೋಪಿ ಹರ್ಷನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಸಂತೋಷನ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಶವಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಸಮೀಪದ ಬೆಟ್ಟದಳ್ಳಿ ಗ್ರಾಮದಲ್ಲಿ ಸೋಮವಾರ ಅಂತ್ಯಕ್ರಿಯೆ ನಡೆಯಿತು.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಕಾಶ್, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net