

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಟೆಮ್ ಬೋರರ್, ಟೀ ಮಾಸ್ಕ್ಕಿಟೋ, ಅಧಿಕ ಇಳುವರಿ ಗೇರು ಮರಗಳ ಕಣ್ಮರೆ, ವಾತಾವರಣ ವೈಪರೀತ್ಯ, ಹವಾಮಾನಕ್ಕೆ ಅನುಗುಣವಾಗಿ ಗೇರು ಸಸಿಗಳ ಅಭಿವೃದ್ಧಿಯಲ್ಲಿ ಹಿನ್ನಡೆ, ಗೇರು ಹೂಗಳಿಗೆ ಬರುವ ರೋಗಕ್ಕೆ ಕಂಡುಕೊಳ್ಳದ ಜೈವಿಕ ಔಷಧ. ಅಕಾಲಿಕ ಮಳೆ, ಚಳಿಗಾಲದ ಕಣ್ಣಮುಚ್ಚಾಲೆ ಹೀಗೆ ಸಾಲು ಸಾಲು ಸಮಸ್ಯೆಗಳನ್ನು ಗೇರು ಕೃಷಿಕರು ಎದುರಿಸಬೇಕಾಗಿದೆ.
ಡಿಸೆಂಬರ್‌ನಲ್ಲಿ ಗೇರು ಹೂಬಿಟ್ಟು ಜನವರಿಯಲ್ಲಿ ಸಲು ಬರುತ್ತದೆ. ಆದರೆ ಗೇರು ಪ್ಲಾಂಟೇಶನ್‌ಗಳಲ್ಲಿ ಅಲ್ಲೊಂದು ಇಲ್ಲೊಂದು ಮರ ಮಾತ್ರ ಹೂಬಿಟ್ಟಿವೆ. ಹೂಬಿಟ್ಟ ಮರಗಳಲ್ಲಿ ಇಬ್ಬನಿ, ಮೋಡದ ಪರಿಣಾಮ ಹೂವು ಕಮರಿ ಹೋಗುತ್ತಿವೆ.
ಕೃಷಿಕರಿಗೆ ಸವಾಲು: ಉಡುಪಿ ಜಿಲ್ಲೆಯಲ್ಲಿ 17,386 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 34,772 ಮೆಟ್ರಿಕ್ ಟನ್ ಗೇರು ಉತ್ಪಾದನೆಯಾಗುತ್ತದೆ. 15 ಸಾವಿರ ಗೇರು ಕೃಷಿಕರಿದ್ದಾರೆ. ಗೇರು ಕೃಷಿಯಲ್ಲಿ ಮುಂಚೂಣಿಯಲ್ಲಿರುವ ಬೈಂದೂರು ಹಾಗೂ ಕುಂದಾಪುರ ಎರಡೂ ತಾಲೂಕುಗಳಲ್ಲಿ ಒಟ್ಟು 5,997 ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆಯಲಾಗುತ್ತಿದೆ. ಹವಮಾನ ವೈಪರೀತ್ಯದಿಂದ ಬೆಳೆ ವಿಳಂಬದ ಜತೆಗೆ ಟಿಮಾಸ್ಕೆಟೋ ಕೀಟ ಬಾಧೆ ಸಹಿತ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಟೆಮ್ ಬೋರರ್ ಗೇರು ಮರಕ್ಕೆ ದೊಡ್ಡ ಶತ್ರು. ಹೂವು ಬಿಟ್ಟ ಕಡೆಗಳಲ್ಲಿ ಮಳೆ ಬಂದಿದ್ದರಿಂದ ಹೂವು ಅರಳದೆ ಕಮರಿ ಹೋಗಿವೆ.
ನಷ್ಟ ನಿಶ್ಚಿತ: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈಗಾಗಲೇ ಕೆಲವೆಡೆ ಗೇರು ಮರದಲ್ಲಿ ಹೂವು ಬಿಟ್ಟಿದ್ದು, ಅವು ಕರಟಿ ಹೋಗುವ ಸಂಭವವಿದ್ದು, ಇಳುವರಿ ಮೇಲೂ ಹೊಡೆತ ಬಿದ್ದಂತಾಗಿದೆ. ಆರಂಭಿಕ ಹಂತದಲ್ಲಿ ಕಡಿಮೆ ಪ್ರಮಾಣದ ಇಳುವರಿ ಮಾರಾಟಕ್ಕೆ ಸಿಗುವುದರಿಂದ ಉತ್ತಮ ದರವಿರುತ್ತದೆ. ಆದರೆ ಈ ಬಾರಿ ಅಕ್ಟೋಬರ್, ನವೆಂಬರ್‌ನಲ್ಲಿ ಮಳೆ ಬಂದಿದ್ದರಿಂದ ಹೆಚ್ಚಿನ ಮರಗಳಲ್ಲಿ ಹೂವು ಬಿಟ್ಟಿಲ್ಲ. ಇದರಿಂದ ಇಳುವರಿ ಕುಂಠಿತವಾಗುತ್ತದೆ.
ಗೇರು ಸಸಿಗಳ ಅಭಿವೃದ್ಧಿ, ಟೀ ಮಾಸ್ಕಿಟೊ ರೋಗಕ್ಕೆ ಜೈವಿಕ ಔಷಧ ಸಿಂಪಡಣೆ ಮುಂತಾದ ವಿಷಯಗಳ ಕುರಿತು ಗೇರು ಅಭಿವೃದ್ಧಿ ನಿಗಮ ಎಂ.ಡಿ. ಜತೆ ಚರ್ಚಿಸಿ ಬೋರ್ಡ್ ಮೀಟಿಂಗ್‌ನಲ್ಲಿ ಗೇರು ಸಮಸ್ಯೆ ಬಗ್ಗೆ ಗಮನ ಸೆಳೆದು ಪರಿಹಾರದ ಬಗ್ಗೆ ಪ್ರಯತ್ನಿಸಲಾಗುತ್ತದೆ. ಗೇರು ಅಭಿವೃದ್ಧಿ ಬಗ್ಗೆ ಪುತ್ತೂರಲ್ಲಿ ರೀಸರ್ಚ್ ಸೆಂಟರ್ ಇದ್ದು, ಸಮಸ್ಯೆ ಬಗ್ಗೆ ವಿಜ್ಞಾನಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ.
ಉದಯ ಕುಮಾರ್ ಜೋಗಿ, ಡಿಎ್ಒ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಹೊಸಾಡು ಮುಳ್ಳಿಕಟ್ಟೆ
ಪ್ರಸಕ್ತ ಅಧಿಕ ಇಳುವರಿ ಕೊಡುವ ಗೇರು ಮರಗಳು ಕಣ್ಮರೆಯಾಗುತ್ತಿವೆ. ಕೀಟ ಬಾಧೆ, ಹವಾಮಾನ ಏರುಪೇರಿನಿಂದಾಗಿ ಇಳುವರಿ ಕುಂಠಿತಗೊಳ್ಳುತ್ತಿದೆ. ಗೇರು ಸಂಶೋಧನ ಕೇಂದ್ರ ವಿಜ್ಞಾನಿಗಳು ಜೈವಿಕವಾಗಿ ರೋಗ ತಡೆಗೆ ಮದ್ದು ಕಂಡುಕೊಳ್ಳಬೇಕು. ಹವಾಮಾನ ಎದುರಿಸಲು ಕೊಡುವ ಗೇರು ತಳಿ ಅಭಿವೃದ್ಧಿ ಅನ್ಯಮಾರ್ಗ. ಗೇರು ಸಮಸ್ಯೆ ಕರಾವಳಿಗೆ ಸೀಮಿತವಾಗಿರದೆ ಪಕ್ಕದ ಕೇರಳ ಹಾಗೂ ಗೋವಾದಲ್ಲೂ ಇದೆ. ಗೇರು ಕೃಷಿಗೆ ವಿಮೆ ಅಳವಡಿಸುವ ಜತೆ ಹೊಸ ಮಾರ್ಗ ಕಂಡುಕೊಳ್ಳಬೇಕಿದೆ.
ಸತ್ಯನಾರಾಯಣ ಉಡುಪ ಜಪ್ತಿ, ಪ್ರಧಾನ ಕಾರ‌್ಯದರ್ಶಿ ಭಾರತೀಯ ಕಿಸಾನ್ ಸಂಘ ಉಡುಪಿ