

ಹುಬ್ಬಳ್ಳಿ: ಗೋಡಂಬಿ ವಹಿವಾಟು ದೇಶಾದ್ಯಂತ ಅದ್ಭುತವಾಗಿ ನಡೆದಿದೆ. ಗೋಡಂಬಿ ಇದೊಂದು ಸಂಪೂರ್ಣ ಆಹಾರ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಅಭಿಪ್ರಾಯಪಟ್ಟರು.
ಮಂಗಳೂರಿನ ಕರ್ನಾಟಕ ಗೋಡಂಬಿ ಉತ್ಪಾದಕರ (ಕೆಸಿಎಂಎ) ಸಂಘದಿಂದ ಇಲ್ಲಿಯ ವಿದ್ಯಾನಗರದ ವಿನಾಯಕ ನಗರದ ವರಹಾ ರೆಸಿಡೆನ್ಸಿಯಲ್ಲಿ ಬುಧವಾರ ಏರ್ಪಡಿಸಿದ್ದ ಗೋಡಂಬಿ ಅಭಿವೃದ್ಧಿ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯದಿಂದ ಇರಲು ಆಹಾರ ಪದ್ಧತಿಯಲ್ಲಿ ಕೆಲವಷ್ಟು ಬದಲಾವಣೆ ಮಾಡಿಕೊಳ್ಳಬೇಕು. ತರಕಾರಿ, ಡ್ರೈಫ್ರೂಟ್ಸ್ ಹಾಗೂ ಹಣ್ಣಗಳನ್ನು ನಿತ್ಯ ತಲಾ ಶೇ. 30ರಷ್ಟು ಸೇವಿಸಬೇಕು. ಅದರಲ್ಲೂ ಬೇಯಿಸಿದ್ದಕ್ಕಿಂತ ಪ್ರಕೃತಿದತ್ತವಾದ ಆಹಾರ ಸೇವನೆ ಒಳ್ಳೆಯದು. ಕ್ಯಾನ್ಸರ್ ಸೆಲ್ಸ್‌ಗಳನ್ನೂ ನಿರ್ಮೂಲನೆ ಮಾಡುತ್ತದೆ ಎಂದರು.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ದಿನಕ್ಕೆ ಇಂತಿಷ್ಟು ಗಂಟೆ ಕೆಲಸ ಮಾಡಬೇಕು ಎಂದಿರುವುದು ಸದ್ದು ಮಾಡುತ್ತಿದೆ. ನನ್ನ ಪ್ರಕಾರ ನಾನೇ ನಿತ್ಯ 16ಗಂಟೆ ಕೆಲಸ ಮಾಡುತ್ತಿದ್ದೆ. ಈಗಲೂ 10 ಗಂಟೆ ಕೆಲಸ ಮಾಡುತ್ತಿದ್ದೇನೆ. ನಾವು ಆಹಾರ ಪದ್ಧತಿಯನ್ನು ಸರಿಯಾಗಿ ರೂಢಿಸಿಕೊಂಡರೆ ನಾವು ಮಾಡುವ ಕೆಲಸ ಆಯಾಸಗೊಳಿಸುವುದಿಲ್ಲ ಎಂದರು.
ಮಂಗಳೂರು ಭಾಗದ ಗೋಡಂಬಿ ಗುಣಮಟ್ಟದಿಂದ ಕೂಡಿವೆ. ಪಶ್ಚಿಮ ಬಂಗಾಳ, ದೆಹಲಿ, ಓಡಿಶಾ ಸೇರಿದಂತೆ ಇತರೆಡೆಯಿಂದ ನಾವು ಗೋಡಂಬಿ ಸರಬರಾಜು ಮಾಡುತ್ತಿದ್ದೇವೆ. ನಿತ್ಯವೂ ನೂರಾರು ಟನ್ ಸರಬರಾಜು ಆಗುತ್ತಿದೆ. ಇದು ಇನ್ನಷ್ಟು ವಿಸ್ತಾರಗೊಳಿಸಬೇಕು ಎಂದರು.
ಕೆನರಾ ಹೋಟೆಲ್ ಮಾಲೀಕ ಅನಂತ ಪದ್ಮನಾಭ ಐತಾಳ ಮಾತನಾಡಿ, ಗೋಡಂಬಿ ಉದ್ಯಮ ಬೆಳೆದಿದೆ. ಈ ಮೊದಲು ನಾವು ಹೋಟೆಲ್ ಬಳಕೆಗೆ ಅರ್ಧ ಕೆಜಿ ತೆಗೆದುಕೊಂಡು ವಾರಗಟ್ಟಲೆ ಉಪಯೋಗಿಸುತ್ತಿದ್ದೆವು. ಈಗ 30ಕೆಜಿಗೂ ಹೆಚ್ಚು ಬಳಕೆ ಮಾಡುತ್ತಿದ್ದೇವೆ. ರೈತರ ಬಳಿಗೆ ಈ ಕೃಷಿ ಪ್ರಚುರಗೊಳ್ಳಬೇಕು. ಸಂಶೋಧನೆ ಕೂಡ ಇನ್ನಷ್ಟು ನಡೆಯಬೇಕು ಎಂದರು.
ಉದ್ಯಮಿ ಸುರೇಂದ್ರ ಅಗರವಾಲ್ ಮಾತನಾಡಿ, ಗೋಡಂಬಿ ಉದ್ಯಮ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಗ್ರಾಹಕರು ಮತ್ತು ರೈತರ ಮಧ್ಯೆ ಕೊಂಡಿಯಾಗಬೇಕು. ಉತ್ಪಾದಕರ ಜತೆ ಜತೆಗೆ ಬೆಳೆಗಾರರಿಗೂ ಲಾಭ ಸಿಗಬೇಕು ಎಂದರು.
ಕೆಸಿಎಂಎ ಅಧ್ಯಕ್ಷ ಎಸ್.ಅನಂತಕೃಷ್ಣ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ, ಉದ್ಯಮಿಗಳಾದ ಸನತ್ ಪೈ, ಗಣೇಶ ಕಾಮತ್, ಬಲರಾಮ ಕೆ.ಎಸ್., ಅದಿತ್ ಕಲಭಾವಿ, ಅಶೋಕ ಕಾಮತ್ ಇತರರು ಇದ್ದರು.