ಜೈಲು ಸಿಬ್ಬಂದಿಗೆ ಚೆಳ್ಳೆಹಣ್ಣು

JAIL (3)
Published on

ಚಿತ್ರದುರ್ಗ: ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದ, ಕೈದಿಯೊಬ್ಬ ತಪ್ಪಿಸಿಕೊಂಡು ಕೆಲಕಾಲ ಜಿಲ್ಲಾ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿಯ ಆತಂಕಕ್ಕೆ ಕಾರಣನಾಗಿದ್ದ.

ಆದರೆ, ಕಾರಾಗೃಹ ಸಿಬ್ಬಂದಿ ಸಮಯಪ್ರಜ್ಞೆಯಿಂದಾಗಿ, ತಪ್ಪಿಸಿಕೊಂಡಿದ್ದ ಎರಡು ಗಂಟೆಯೊಳಗೆ ಸಿಕ್ಕಿಬಿದ್ದಿದ್ದು, ಈಗ ಮತ್ತೆ ಜೈಲು ಸೇರಿದ್ದಾನೆ.

ಎನ್‌ಐ ಆಕ್ಟ್‌ನಡಿ ಬಂಧಿತನಾಗಿ ಆರು ತಿಂಗಳ ಜೈಲು ಶಿಕ್ಷೆಗೆ ಒಳಗಾಗಿದ್ದ ಚಿತ್ರದುರ್ಗ ತಾಲೂಕು ಗಾರೆಹಟ್ಟಿ ನಿವಾಸಿ ಅಶೋಕ್ ಸೆಪ್ಟೆಂಬರ್ 9ರಂದು ಜೈಲು ಸೇರಿದ್ದ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಆತನನ್ನು ಹಾಗೂ ಮತ್ತೊಬ್ಬ ಕೈದಿ ಕೃಷ್ಣನನ್ನು ಶುಕ್ರವಾರ ಮಧ್ಯಾಹ್ನ 2.30ರ ಹೊತ್ತಿಗೆ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಈ ವೇಳೆ ಕಾರಾಗೃಹ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಅಶೋಕ್ ಪರಾರಿಯಾಗಿದ್ದ.

ಕೂಡಲೇ ಅಲರ್ಟ್ ಆದ ಸಿಬ್ಬಂದಿ, ಅಶೋಕ್‌ನನ್ನು ಸಂಜೆ 4.30ರ ಸಮಯದಲ್ಲಿ ನಗರದ ಹೊಳಲ್ಕೆರೆ ರಸ್ತೆ ಮಾರಮ್ಮ ದೇವಾಲಯದ ಬಳಿ ಪತ್ತೆ ಮಾಡಿ ಜೈಲಿಗೆ ಮರಳಿ ಕರೆದೊಯ್ದು ನಿಟ್ಟಿಸಿರು ಬಿಟ್ಟಿದ್ದಾರೆ. ಜೈಲು ಅಧಿಕಾರಿ ನೀಡಿದ ದೂರು ಆಧರಿಸಿ ನಗರ ಠಾಣೆ ಪಿಐ ತಿಪ್ಪೇಸ್ವಾಮಿ ವಿಚಾರಣೆ ನಡೆಸಿದ್ದಾರೆ ಎಂದು ಎಸ್‌ಪಿ ಧರ್ಮೇಂದ್ರಕುಮಾರ್‌ಮೀನಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net