ಗೇರು ಉದ್ಯಮಕ್ಕೆ ಹಿನ್ನಡೆ ತಾತ್ಕಾಲಿಕ

CASHEW
Published on

ಉಡುಪಿ: ಜಾಗತಿಕ ಮಟ್ಟದಲ್ಲಿ ಕರೊನಾ ವೈರಸ್ ಭೀತಿಯಿಂದಾಗಿ ರಫ್ತು ಮತ್ತು ಆಮದು ಸಂಬಂಧಿಸಿ ಹಲವು ಉದ್ಯಮಗಳಿಗೆ ಹೊಡೆತ ಬಿದ್ದಿದೆ. ಪ್ರಮುಖವಾಗಿ ಭಾರತದಲ್ಲಿಯೂ ಗೇರು ರಫ್ತಿಗೆ ಕರೊನಾ ಕರಿಛಾಯೆ ಮೂಡಿದೆ ಎಂದು ಸಿಂಡಿಕೇಟ್ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್ ಹೇಳಿದರು. ಮಣಿಪಾಲದಲ್ಲಿ ಸಿಂಡಿಕೇಟ್ ಬ್ಯಾಂಕ್ ಮಂಗಳವಾರ ಆಯೋಜಿದ್ದ ಗೇರುಬೀಜ ಸಂಸ್ಕರಣೆ ಹಾಗೂ ರಪ್ತುದಾರರ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದರು.

ಗೇರು ಉದ್ಯಮಕ್ಕೆ ಇದು ತಾತ್ಕಲಿಕ ಮತ್ತು ಸಣ್ಣ ಪ್ರಮಾಣದ ಹಿನ್ನಡೆಯಾಗಿದ್ದು, ಶೀಘ್ರ ಸರಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಅಭಿಪ್ರಾಯಪಟ್ಟರು. ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಗೇರು ಬೀಜ ಸಂಸ್ಕರಣೆ ಉದ್ಯಮ ಪ್ರೋತ್ಸಾಹಿಸಲು ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆರ್ಥಿಕ ಮತ್ತು ತಾಂತ್ರಿಕತೆಗೆ ಸಂಬಂಧಿಸಿ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಬ್ಯಾಂಕ್ ಬದ್ಧವಾಗಿದೆ. ಗುಣಮಟ್ಟ ಮತ್ತು ಸಮಯ ಪಾಲನೆ ಈ ಭಾಗದ ಗೇರು ಉದ್ಯಮ ಯಶಸ್ಸಿಗೆ ಕಾರಣವಾಗಿದೆ. ಗೇರು ಉದ್ಯಮ ಇನ್ನಷ್ಟು ಪ್ರಗತಿ ಕಾಣಬೇಕು ಎಂದು ಆಶಿಸಿದರು.

ಸಮ್ಮೇಳನದಲ್ಲಿ ಮಂಗಳೂರು, ಉಡುಪಿ, ಕಾರವಾರ ಹಾಗೂ ಬೆಳಗಾವಿ ಜಿಲ್ಲೆಗಳ ಗೇರುಬೀಜ ಸಂಸ್ಕರಣೆ ಹಾಗೂ ರಫ್ತುದಾರರು ಭಾ ಗವಹಿಸಿದ್ದರು. ಗೇರುಬೀಜ ಉತ್ಪಾದನೆ, ಆಮದು ಹಾಗೂ ರಫ್ತಿಗೆ ಸಂಬಂದಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಗೇರು ಉದ್ಯಮಿಗಳಾದ ಬೋಳ ರಮಾನಂದ್ ಕಾಮತ್, ಸುಬ್ರಾಯ ಪೈ, ವಾಲ್ಟರ್ ಡಿಸೋಜ, ಮೋಹನ್ ರಾವ್ ಉಪಸ್ಥಿತರಿದ್ದರು. ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ವಲಯ ಕಚೇರಿ ಮಹಾಪ್ರಬಂಧಕ ಭಾಸ್ಕರ ಹಂದೆ ಸ್ವಾಗತಿಸಿದರು. ಸಿಂಡಿಕೇಟ್ ಬ್ಯಾಂಕ್ ಬ್ರಹ್ಮಾವರ ಶಾಖೆ ವ್ಯವಸ್ಥಾಪಕಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.

ಇನ್ನಷ್ಟು ಪ್ರಯೋಗ ಬೇಕು: ಸಿಂಡಿಕೇಟ್ ಬ್ಯಾಂಕ್ ಆದ್ಯತಾ ವಲಯದ ಮಹಾಪ್ರಬಂಧಕ ಟಿ.ಮಣಿವಣ್ಣನ್ ಮಾತನಾಡಿ, ಆರ್ಥಿಕ ಕೊಡುಗೆ ಸೇರಿದಂತೆ ಗೇರು ಉದ್ಯಮ ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಕೊಡುಗೆ ನೀಡಿದೆ. ಗೇರು ಉದ್ಯಮವು ಆಹಾರ ಕ್ಷೇತ್ರಕ್ಕೆ ಪೂರಕವಾಗಿ ಇನ್ನಷ್ಟು ಪ್ರಯೋಗಕ್ಕೆ ಒಳಗಾಗಬೇಕಿದೆ. ಚಾಕಲೇಟ್ಸ್, ಕ್ಯಾಂಡಿ, ಜ್ಯೂಸ್ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಒಲವು ತೋರಿದರೆ ಲಾಭದಾಯಕ ಉದ್ಯಮ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net