

ಮಂಗಳೂರು: ರೈಲ್ವೇ ನಿಲ್ದಾಣ ರಸ್ತೆಯ ನೂರ್ ಮಸೀದಿಯ ಪ್ರಾರ್ಥನಾ ಕೊಠಡಿಯ ರ‌್ಯಾಕ್‌ನಲ್ಲಿ ಇಟ್ಟಿದ್ದ 2,18,480 ರೂ. ನಗದು ಕಳವು ಮಾಡಿರುವ ಕುರಿಂತೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರಾದ ಅಬ್ದುಲ್ ಹಮೀದ್ ಅವರು ಭಟ್ಕಳದಿಂದ ಮಂಗಳೂರಿಗೆ ಬಂದು ಹಂಪನಕಟ್ಟೆಯಿಂದ ರೈಲ್ವೇ ನಿಲ್ದಾಣ ರಸ್ತೆಯಲ್ಲಿರುವ ನೂರ್ ಮಸೀದಿಗೆ ಪ್ರಾರ್ಥನೆಗೆ ಹೋಗಿದ್ದಾರೆ. ಪ್ರಾರ್ಥನೆ ಸಂದರ್ಭ ತನ್ನಲ್ಲಿದ್ದ ನಗದು ಹೊಂದಿದ್ದ ಬ್ಯಾಗನ್ನು ಹಾಲ್‌ನಲ್ಲಿರುವ ಕುರಾನ್ ಇಡುವ ರ‌್ಯಾಕ್‌ನಲ್ಲಿ ಇಟ್ಟಿದ್ದರು. ಪ್ರಾರ್ಥನೆ ಮುಗಿಸಿ ನಗರದ ಕಲ್ಪನಾ ರಸ್ತೆಯಲ್ಲಿ ತಾನು ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಇಕ್ರಾ ಅರೇಬಿಕ್ ಸ್ಕೂಲ್‌ಗೆ ಹೋಗಿ ಆಸೀಫ್ ಎಂಬವರಿಗೆ ಹಣ ಕೊಡಲೆಂದು ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ಇಟ್ಟಿದ್ದ 2,18,480 ರೂ. ನಗದು ಹೊಂದಿದ್ದ ಪ್ಲಾಸ್ಟಿಕ್ ಚೀಲ ಇರಲಿಲ್ಲ. ಮಸೀದಿಗೆ ಬಂದು ಸಿಸಿ ಕೆಮರಾ ಪರಿಶೀಲಿಸಿದಾಗ ಯಾರೋ ಕಳ್ಳರು ಕಳವು ಮಾಡಿರುವುದು ಕಂಡು ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.