

ಹುಬ್ಬಳ್ಳಿ: ಈದ್ ಮಿಲಾದ್ ಮೆರವಣಿಗೆ ವೇಳೆ ರಾಷ್ಟ್ರಧ್ವಜ ವಿರೂಪಗೊಳಿಸಿದ ಆರೋಪದಡಿ ಇಲ್ಲಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಸೆ. 5ರಂದು ಗೋಕುಲ ರಸ್ತೆಯ ಮಂಜುನಾಥನಗರ ಕ್ರಾಸ್ ಬಳಿ ನಡೆದ ಈದ್ ಮೆರವಣಿಗೆ ಸಂದರ್ಭದಲ್ಲಿ ಮೂರುನಾಲ್ಕು ಜನರು ನಕ್ಷತ್ರ ಹಾಗೂ ಅರ್ಧ ಚಂದ್ರಾಕೃತಿ ಇರುವ ರಾಷ್ಟ್ರಧ್ವಜ ಹಾರಾಡಿಸುತ್ತಿದ್ದರು. ರಾಷ್ಟ್ರಧ್ವಜ ವಿರೂಪಗೊಳಿಸಿ ಮೂಲ ಸ್ವರೂಪಕ್ಕೆ ಧಕ್ಕೆ ತಂದು ಅವಮಾನ ಮಾಡಿರುವ ಕುರಿತು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಗೌರವಗಳಿಗೆ ಧಕ್ಕೆ ತರುವ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.