ಬೀದಿ ಬದಿ ವ್ಯಾಪಾರಿಗೆ ನಿಂದನೆ ಮಹಿಳೆ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿ ಬೀದಿ ಬದಿ ವ್ಯಾಪಾರಿಗೆ ದ್ವೇಷ ಪೂರಿತ ಮಾತುಗಳಿಂದ ನಿಂದಿಸಿದ ಮಹಿಳೆಯೊಬ್ಬರ ವಿರುದ್ಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರದ ಹಿಂದೆ ಮಹಿಳೆ ಬೀದಿ ಬದಿ ವ್ಯಾಪಾರಿಯನ್ನು ನಿಂದಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ನಡೆದ ದಿನ ಸ್ಥಳದಿಂದ ಪರಾರಿಯಾಗಿದ್ದ ವ್ಯಾಪಾರಿ ಶನಿವಾರ ಠಾಣೆಗೆ ಬಂದು ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತರು, ಧರ್ಮದ ಆಧಾರದ ಮೇಲೆ ಮಾತ್ರವಲ್ಲದೆ, ಜನ್ಮಸ್ಥಳ, ಪ್ರದೇಶ, ಭಾಷೆ ಅಥವಾ ಇತರೆ ಗುರುತುಗಳ ಆಧಾರದ ಮೇಲೂ ದ್ವೇಷ, ವೈಷಮ್ಯ ಅಥವಾ ಅಸೌಹಾರ್ದತೆಯನ್ನು ಪ್ರದರ್ಶಿಸಿದರೆ ಬಿಎನ್ ಎಸ್ ಕಲಂ 196ರಡಿ ಪ್ರಕರಣ ದಾಖಲಿಸಲು ಅವಕಾಶವಿದೆ. ಲಭ್ಯವಿರುವ ವಾಸ್ತವಾಂಶಗಳು ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಿಎನ್ ಎಸ್ ಕಲಂ 196 ಮತ್ತು 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರತಿ ವ್ಯಕ್ತಿಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸುವ ಹಕ್ಕಿದೆ. ಆದರೆ ಅಂತಹ ಕ್ರಮಗಳು ಕಾನೂನಿನ ಚೌಕಟ್ಟಿನೊಳಗೆ ಇರಬೇಕು.
ಘಟನೆ ನಡೆದ ದಿನ, ವ್ಯಾಪಾರಿಯ ವಿರುದ್ಧವೂ ಮಹಿಳೆ ದೂರು ನೀಡಿದ್ದರು. ವಿಡಿಯೋವನ್ನು ಪರಿಶೀಲಿಸಿದ ಬಳಿಕ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಬದಲಾಗಿ, ದೂರವನ್ನು ನಾನ್ ಕಾಗ್ನಿಜಿಬಲ್ ಪ್ರಕರಣ ಎಂದು ದಾಖಲಿಸಿ, ಸ್ವೀಕೃತಿ ಪತ್ರವನ್ನು ನೀಡಲಾಗಿತ್ತು. ಅನಂತರ ಅವರು ಕಾನೂನು ಪ್ರಕ್ರಿಯೆಯಂತೆ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಸ್ತುತ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net