ಪಾಕ್ ಪರ ಘೋಷಣೆ ಕೂಗಿದ ದ್ರೋಹಿಗಳ ವಿರುದ್ಧ ಪ್ರಕರಣ ದಾಖಲು

Published on

ಮೈಸೂರು: ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಅರವಿಂದ ಶರ್ಮ ಅವರು ಹುಣಸೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಹುಣಸೂರು ಪಟ್ಟಣದ ಶಬ್ಬೀರ್‌ನಗರದಲ್ಲಿ ಸೆ.5ರಂದು ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಕೆಲ ಕಿಡಿಗೇಡಿಗಳು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದನ್ನು ಗಮನಿಸಿದ ಮೈಸೂರು ಕುವೆಂಪುನಗರದ ಅರವಿಂದ ಶರ್ಮ ಅವರುದೂರು ನೀಡಿದ್ದಾರೆ.

ಆದರೆ ಇಂತಹ ಘೋಷಣೆ ಕೂಗಿಲ್ಲ ಎಂದು ಈದ್ ಮಿಲಾದ್ ಆಚರಣಾ ಸಮಿತಿ ನಿರಾಕರಿಸಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹಬ್ಬಿಸುತ್ತಿರುವ ಅರವಿಂದ ಶರ್ಮ ವಿರುದ್ಧ ಕ್ರಮಕೈಗೊಳ್ಳುವಂತೆ ಸಮಿತಿಯವರೇ ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಪ್ರಶ್ನಿಸಿದ ಅರವಿಂದ ಶರ್ಮ ಅವರು, ಘೋಷಣೆ ಕೂಗಿದ ಚಿತ್ರದ ತುಣುಕುಗಳನ್ನು ಬೆಂಗಳೂರಿನ ಖಾಸಗಿ ಪ್ರಯೋಗಾಲಯಕ್ಕೆ ಕಳಹಿಸಿದಾಗ ಪಾಕ್ ಪರ ಘೋಷಣೆ ಕೂಗಿರುವುದು ಕಂಡು ಬಂದಿದೆ ಎಂದು ವರದಿ ಬಂದಿತ್ತು.

ಈ ವರದಿ ಆಧರಿಸಿ ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಂತಹ ಘೋಷಣೆ ಕೂಗಿರುವ ಕಿಡಿಗೇಡಿಗಳನ್ನು ದೇಶ ದ್ರೋಹ ಕಾಯ್ದೆ ಅಡಿ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net