

ವಿಜಯವಾಣಿ ಸುದ್ದಿಜಾಲ ಉಡುಪಿ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಸುಡುಮದ್ದು (ಪಟಾಕಿ) ಸಂಗ್ರಹಿಸಿದ್ದ ವ್ಯಾಪಾರಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದೆ. ಕೃತಕವಾಗಿ ಪಟಾಕಿ ಮಾರುವುದಿದ್ದರೂ ಸಹ ಸ್ಥಳೀಯ ಆಡಳಿತದಿಂದ ಎನ್ಒಸಿ ಪಡೆಯುವಂತೆ ಜಿಲ್ಲಾಡಳಿತ ತಿಳಿಸಿದ್ದರೂ ಸಹ ಅದನ್ನು ನಿರ್ಲಕ್ಷಿಸಿದ್ದ ಐವರು ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕೋಟ, ಬ್ರಹ್ಮಾವರ ಹಾಗೂ ಕಾರ್ಕಳ ಠಾಣಾ ಪೊಲೀಸರು ಮೂರು ಕಡೆ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ ಕೋಟ್ಯಂತರ ರೂ. ಮೌಲ್ಯದ ಪಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ.
ದೀಪಾವಳಿ ಹಬ್ಬಕ್ಕಾಗಿ ಪಟಾಕಿ ಮಾರಾಟ ಮಾಡಲು ಕಡ್ಡಾಯವಾಗಿ ಪರವಾನಗಿ ಪಡೆಯುವಂತೆ ಜಿಲ್ಲಾಡಳಿತ ಸೂಚಿಸಿದ್ದರೂ ಸಹ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಟಾಕಿಗಳನ್ನು ವಶಕ್ಕೆ ಪಡೆದಿದ್ದೇವೆ. ಅವುಗಳನ್ನು ಪರವಾನಗಿ ಹೊಂದಿರುವ ಮ್ಯಾಗಜೀನ್ (ಸ್ಫೋಟಕಗಳು) ಸಂಗ್ರಹಣಾ ಪ್ರದೇಶದಲ್ಲಿ ನಾಶಪಡಿಸಲಾಗುವುದು. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. | ಹರಿರಾಮ ಶಂಕರ್. ಜಿಲ್ಲಾ ಪೊಲೀಸ್ ವರಿಷ್ಠ