

ಹುಬ್ಬಳ್ಳಿ : ದೂಧಸಾಗರ ಜಲಪಾತಕ್ಕೆ ತಲುಪಲು ರೈಲ್ವೆ ಹಳಿ ಹಾಗೂ ಆಸ್ತಿಯೊಳಗೆ ಅತಿಕ್ರಮವಾಗಿ ಪ್ರವೇಶಿಸಿದ ಆರೋಪದ ಮೇರೆಗೆ 21 ಜನ ಪ್ರವಾಸಿಗರ ವಿರುದ್ಧ ಆರ್ಪಿಎಫ್ (ರೈಲ್ವೆ ರಕ್ಷಣಾ ಪಡೆ) ಪ್ರಕರಣ ದಾಖಲಿಸಿದೆ.
ಎಲ್ಲರೂ ರೈಲ್ವೆಯ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ, ದಂಡ ಪಾವತಿಸಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ದೂಧಸಾಗರ ಜಲಪಾತಕ್ಕೆ ಭೇಟಿ ನೀಡಲು ಪ್ರವಾಸಿಗರು ಯಶವಂತಪುರ- ವಾಸ್ಕೊ ಎಕ್ಸ್ಪ್ರೆಸ್ ರೈಲಿನ ಮೂಲಕ ಆಗಮಿಸಿ, ಜಲಪಾತದವರೆಗೆ ರೈಲ್ವೆ ಹಳಿಗಳ ಮಧ್ಯದ ಜಾಗದಲ್ಲಿ ನಡೆಯುತ್ತಾರೆ. ಭದ್ರತೆ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿಯಾಗಿದೆ.
ಕ್ಯಾಸಲ್ರಾಕ್-ದೂಧಸಾಗರ ಮಾರ್ಗದಲ್ಲಿ ಕಡಿದಾದ ಕಣಿವೆಗಳು, ಸುರಂಗಗಳು ಇದ್ದು, ಕಾಡು ಪ್ರಾಣಿಗಳು ಸಂಚರಿಸುತ್ತವೆ. ಹೀಗಾಗಿ, ಇಲ್ಲಿಗೆ ಆಗಮಿಸುವ ಅನೇಕ ಪ್ರವಾಸಿಗರು ದುರಂತಕ್ಕೆ ಈಡಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ದೂಧಸಾಗರ ಜಲಪಾತ ತಲುಪಲು ರೈಲ್ವೆ ಹಳಿಗಳನ್ನು ಬಳಸದಂತೆ ರೈಲ್ವೆ ಭದ್ರತಾ ದಳ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.