

ಮಂಗಳೂರು: ನಗರದ ಹೊರ ವಲಯದ ಬಜಪೆಯಲ್ಲಿ ಪಟಾಕಿ ಮಾರಾಟ ನಡೆಸುತ್ತಿದ್ದವರಿಗೆ ಬೆದರಿಕೆಯೊಡ್ಡಿ ಹಫ್ತಾ ಕೇಳಿದ ಆರೋಪದಲ್ಲಿ ಫಾಜಿಲ್ ಕೊಲೆ ಪ್ರಕರಣದ ಆರೋಪಿ, ರೌಡಿ ಶೀಟರ್ ಪ್ರಶಾಂತ್ ಯಾನೆ ಪಚ್ಚು ಮತ್ತು ಆತನ ಸಹಚರ ಅಶ್ವಿತ್ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಅ.22ರಂದು ನಡೆದಿದೆ. ಪಟಾಕಿ ಮಾರಾಟ ಮಾಡುತ್ತಿದ್ದವರನ್ನು ಬೆದರಿಸಿ ಹಣ ಕೇಳಿದ್ದಾನೆ. ಇದರಿಂದ ಪಟಾಕಿ ವ್ಯಾಪಾರಸ್ಥರು ಹೆದರಿದ್ದು, ಅಂದು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಪೊಲೀಸರು ಮಾಹಿತಿ ತಿಳಿದು ರಕ್ಷಣೆ ಕೊಡುತ್ತೇವೆ. ದೂರು ನೀಡಿ ಎಂದು ಧೈರ್ಯ ತುಂಬಿದ್ದರಿಂದ ಅ.23ರಂದು ಪಟಾಕಿ ಅಂಗಡಿಯ ದಾಮೋದರ್ ಎಂಬವರು ದೂರು ನೀಡಿದ್ದಾರೆ. ಆರೋಪಿ ಪ್ರಶಾಂತ್ ಇತ್ತೀಚೆಗೆ ಕೊಲೆಯಾದ ಸುಹಾಸ್ ಶೆಟ್ಟಿ ಸಹಚರ. ಬಜಪೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ಈತನ ಜತೆಗಿದ್ದ ಅಶ್ವಿತ್ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ.
ಆಯುಕ್ತರ ಎಚ್ಚರಿಕೆ: ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ಜತೆ ತಿರುಗಾಡದಂತೆ ಮೊದಲೇ ಹೇಳಿದ್ದೇನೆ. ರೌಡಿಗಳ ಜತೆಗಿದ್ದು ಅಪರಾಧದಲ್ಲಿ ಸಿಲುಕಬೇಡಿ ಎಂದೂ ತಿಳಿಸಿದ್ದೆ. ನೀವು ನಮ್ಮ ಮಾತು ಕೇಳುತ್ತಿಲ್ಲ ಅನಿಸುತ್ತದೆ. ನಮ್ಮ ಮಾತು ಕೇಳದಿದ್ದರೆ ನಾವು ಏನು ಮಾಡಬೇಕೆಂದು ಗೊತ್ತಿದೆ. ನಾವು ನಮ್ಮ ಕೆಲಸ ಮಾಡುತ್ತೇವೆ. ನಿಮ್ಮ ಇಷ್ಟದಂತೆ ಮಾಡಿಕೊಂಡರೆ ನಮಗೆ ತೊಂದರೆ ಇಲ್ಲ. ಏನು ಬೇಕಾದರೂ ಮಾಡಿಕೊಂಡಿ ಹೋಗಿ. ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.