

ಹಾವೇರಿ: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಗುಂಡಗಟ್ಟಿ ಗ್ರಾಮದಲ್ಲಿ ಕೊಲೆಯೊಂದು ನಡೆದಿದ್ದು, ತಾಯಿ-ಮಗನ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಹನುಮಂತಪ್ಪ ಬಸಪ್ಪ ಗುಡದಳ್ಳಿ (62) ಕೊಲೆಯಾದ ವ್ಯಕ್ತಿ. ಪತ್ನಿ ಕುಸುಮಾ ಗುಡದಳ್ಳಿ, ಮಗ ಮರಳಸಿದಪ್ಪ ಗುಡದಳ್ಳಿ ಕೊಲೆ ಆರೋಪಿಗಳು.
ಪತ್ನಿ ಕುಸುಮಾ ಸಂಘ ಹಾಗೂ ಇತರ ಕೆಲವು ಕಡೆಗಳಲ್ಲಿ ಸುಮಾರು ಎಂಟು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಪತಿ ದುಡಿದು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಪುತ್ರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಹನುಮಂತಪ್ಪಗೆ ಪತ್ನಿ ಹಾಗೂ ಪುತ್ರ ಪ್ರತಿದಿನ ಹಿಂಸೆ ನೀಡುತ್ತಿದ್ದರು. ಸಾಲದ್ದಕ್ಕೆ ಕೊನೆಯಲ್ಲಿ ಕುಡುಗೋಲಿನಿಂದ ಬಲವಾಗಿ ಹೊಡೆದು ಸಾಯಿಸಿದ್ದಾರೆ. ಅಲ್ಲದೆ ಪತಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಲು ಶವಕ್ಕೆ ಉರುಳು ಹಾಕಿ ನೇತು ಹಾಕಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಈ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)