

ಚಿಕ್ಕಬಳ್ಳಾಪುರ: ಪೊಲೀಸ್ ಅಧಿಕಾರಿಯ ಗುರುತಿನ ಚೀಟಿ ತೋರಿಸಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ವಾಹನ ಶುಲ್ಕ ಉಳಿಸಿಕೊಳ್ಳುವುದರ ಜತೆಗೆ ವಿವಿಧೆಡೆ ವಿಐಪಿ ಗೌರವ ಪಡೆಯುತ್ತಿದ್ದ ಗುತ್ತಿಗೆದಾರನೊಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಾನೆ.
ವಂಚನೆಯ ಪ್ರಕರಣವನ್ನು ಸ್ವತಃ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅರುಣ್ ಚಕ್ರವರ್ತಿ ಬಯಲಿಗೆಳೆದಿದ್ದಾರೆ.
ವಿವಿಧೆಡೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ನಕಲಿ ಗುರುತಿನ ಚೀಟಿಗಳನ್ನು ತೋರಿಸಿ, ಜನರನ್ನು ವಂಚಿಸುವ ಪ್ರಕರಣಗಳು ವರದಿಯಾಗುತ್ತಿವೆ. ಇದರ ನಡುವೆ ಚಿಕ್ಕಬಳ್ಳಾಪುರ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಗುರುತಿನ ಚೀಟಿ ದುರ್ಬಳಕೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇತ್ತೀಚಿಗೆ ಕಾರ್ಯ ನಿಮಿತ್ತ ಅರುಣ್ ಚಕ್ರವರ್ತಿ ನಂದಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಬೆಂಗಳೂರಿಗೆ ಆರೋಪಿಯೊಂದಿಗೆ ವಾಹನದಲ್ಲಿ ಹೋಗುತ್ತಿದ್ದರು. ಇದೇ ವೇಳೆ ನೈಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಟೋಲ್ ನಲ್ಲಿ ಆರೋಪಿಯು ಗುರುತಿನ ಚೀಟಿ ತೋರಿಸಿದ್ದಾನೆ. ಇದರಿಂದ ಅನುಮಾನಗೊಂಡು ಹಿರಿಯ ಅಧಿಕಾರಿ ಪ್ರಶ್ನಿಸಿದಾಗ, ದುರ್ಬಳಕೆಯ ವಿಚಾರವು ಬಯಲಿಗೆ ಬಂದಿದೆ.
ತಲಘಟ್ಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.