ಜೆಜೆಎಂ ಕಾಮಗಾರಿಗೆ ಅಪ್ರಾಪ್ತರ ಬಳಕೆ ಪ್ರಕರಣ, ಸ್ಥಳಕ್ಕೆ ಅಧಿಕಾರಿಗಳ ಭೇಟಿ-ಪರಿಶೀಲನೆ, ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

MASALI JJM CHILD LABOR
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಮಕ್ಕಳನ್ನು ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎಇಇ ಆರ್.ಎಸ್. ಬಂಡಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
Published on

ವಿಜಯಪುರ: ಜಲ ಜೀವನ್ ಮಿಷನ್ ಕಾಮಗಾರಿಗೆ ಅಪ್ರಾಪ್ತರನ್ನು ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಕೈಗೊಳ್ಳಲಾಗಿರುವ ಜಲ ಜೀವನ್ ಮಿಷನ್ ಕಾಮಗಾರಿಗೆ ಸಂಬಂಧಿಸಿದಂತೆ ಸಿಮೇಂಟ್ ಪೋಲ್‌ಗಳಿಗೆ ಬಣ್ಣ ಬಳಿಯಲು ಮಕ್ಕಳನ್ನು ಬಳಸಿಕೊಂಡ ಫೋಟೊ ವೈರಲ್ ಆಗಿತ್ತು. ಹಲವು ಮಕ್ಕಳು ಬಣ್ಣದ ಡಬ್ಬ ಹಾಗೂ ಕುಂಚ ಹಿಡಿದು ಕಾಮಗಾರಿಗೆ ಬಣ್ಣ ಬಳಿಯುತ್ತಿರುವ ಫೋಟೊಗಳನ್ನಾಧರಿಸಿ ‘ವಿಜಯವಾಣಿ’ಯಲ್ಲಿ ‘ಜೆಜೆಎಂ ಕಾಮಗಾರಿಗೆ ಅಪ್ರಾಪ್ತರ ಬಳಕೆ’ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು.

ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗದ ಸದಸ್ಯ ಶಶಿಧರ ಕೋಸಂಬೆ ‘ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಅವರಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ’ ಪ್ರತಿಕ್ರಿಯಿಸಿದ್ದರು. ಅಲ್ಲದೇ, ಸಿಇಒ ರಿಷಿ ಆನಂದ ಕೂಡ ಪರಿಶೀಲನೆಗಾಗಿ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದ್ದರು.

ಮುಂದುವರಿದ ಭಾಗವಾಗಿ ಶುಕ್ರವಾರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಅಧಿಕೃತವಾಗಿ ದೂರು ದಾಖಲಿಸಿಕೊಂಡು ‘ಜೆಜೆಎಂ ಕಾಮಗಾರಿಗೆ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಬಳಸಿಕೊಂಡಿರುವ ಬಗ್ಗೆ ಸೂಕ್ತ ಪರಿಶೀಲನೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ನಿರ್ದೇಶನ ನೀಡುವಂತೆ’ಯೂ ‘ಏಳು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ’ ಯೂ ಸಿಇಒ ರಿಷಿ ಆನಂದ ಅವರಿಗೆ ನಿರ್ದೇಶನ ನೀಡಿದೆ.

ಈ ಮಧ್ಯೆ ಗುರುವಾರ ಸಂಜೆಯಷ್ಟೇ ಇಂಡಿ ಸಹಾಯಕ ಅಭಿಯಂತರ ಆರ್.ಎಸ್. ಬಂಡಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಪಿಡಿಒ ಅಶೋಕ ಹೊನವಾಡ ಸೇರಿದಂತೆ ಗ್ರಾಮದ ಹಲವು ಪ್ರಮುಖರು ಸ್ಥಳದಲ್ಲಿದ್ದು, ಮಾಹಿತಿ ನೀಡಿದರು. ಅಲ್ಲದೇ, ಮಕ್ಕಳನ್ನು ಕಾಮಗಾರಿಗೆ ಬಳಸಿಕೊಂಡ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net