

ವಿಜಯಪುರ: ಇಟ್ಟಿಗೆ ಬಟ್ಟಿ ಕಾರ್ಮಿಕರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಮಾಜಿ ಸಚಿವ ಎಚ್.ಆಂಜನೇಯ ಅವರು, ನೊಂದ ಜೀವಗಳಿಗೆ ಸರ್ಕಾರದಿಂದ ನೆರವು ಕೊಡಿಸುವ ಭರವಸೆ ನೀಡಿದರು.
ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಕಾರ್ಮಿಕರನ್ನು ಶುಕ್ರವಾರ ಭೇಟಿ ಮಾಡಿದ ಆಂಜನೇಯ ಅವರು, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಫೋನ್ ಮೂಲಕ ಮಾತನಾಡಿಸಿ ನೆರವಿನ ಭರವಸೆ ಕೊಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣ ತೀವ್ರ ಖಂಡನೀಯ. ಅಮಾನವೀಯ. ಕರ್ನಾಟಕದಲ್ಲಿಯೇ ನಡೆಯದಂಥ ಕ್ರೌರ್ಯ ಇಲ್ಲಿ ನಡೆದಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ. ಪಾಟೀಲರ ನಿರ್ದೇಶನದ ಮೇರೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕರ ಆರೋಗ್ಯ ವಿಚಾರಿಸಿದ್ದೇನೆ. ಈ ವೇಳೆ ಕಾರ್ಮಿಕರು ಬಿಚ್ಚಿಟ್ಟ ಸಂಗತಿ ಅತ್ಯಂತ ಕರಾಳವಾದುದು. ಇಟ್ಟಿಗೆ ಬಟ್ಟಿ ಮಾಲೀಕರು ಮೂರು ದಿನಗಳ ಕಾಲ ಥಳಿಸಿ ತಾವೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬಂಧು-ಬಳಗಕ್ಕೆ ಕಳುಹಿಸಿದ್ದಾರೆ. ಹೀಗಾಗಿ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಬೇರೆಯವರು ಇಂಥ ಧೋರಣೆ ಅನುಕರಣೆ ಮಾಡಬಾರದು. ಆ ರೀತಿ ಉಗ್ರ ಶಿಕ್ಷೆ ನೀಡಿ ಸಂಭವನೀಯ ಕೃತ್ಯ ತಡೆಯಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ನೊಂದ ಕಾರ್ಮಿಕರ ಜೊತೆ ಫೋನ್ನಲ್ಲಿಯೇ ಮಾತನಾಡಿದ್ದಾರೆ. ಸಹಾಯ ಮಾಡುವುದಾಗಿ ಹೇಳಿದ್ದಾರೆ. ಯಾವುದಕ್ಕೂ ಹೆದರಬೇಡಿ ಎಂದಿರುವ ಸಿಎಂ, ನೊಂದವರಿಗೆ ಸಹಾಯ ಸಹಕಾರ ನೀಡುವುದಾಗಿಯೂ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದಗಿಯೂ ಭರವಸೆ ನೀಡಿದ್ದಾರೆ. ಕಾರ್ಮಿಕರಿಗೆ ಅವರ ಹಳ್ಳಿಗಳಲ್ಲಿಯೇ ನಿಗಮಗಳಿಂದ ಭೂಮಿ ಒಡೆತನ ಯೋಜನೆಯಡಿ ಭೂಮಿ ಕೊಡಿಸಲು, ಜಮೀನುಗಳಿಗೆ ಬೋರ್ವೆಲ್ ಕೊಡಿಸಲು ಅವಕಾಶ ಇದೆ. ಮನೆ ಸೌಲಭ್ಯ ಸಹ ನಿಗಮಗಳಡಿ ನೀಡಬಹುದಾಗಿದ್ದು ಅದನ್ನು ಕಲ್ಪಿಸಲು ಸಿಎಂಗೆ ಮನವಿ ಮಾಡಿದ್ದಾಗಿ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮತ್ತಿತರ ಮುಖಂಡರುಗಳಿದ್ದರು.