

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಖುಷಿಪಡಸಲು ನಮ್ಮ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಎಷ್ಟು ಕೇಸ್‌ಗಳನ್ನು ಹಾಕುತ್ತಾರೆ ನೋಡಿಯೋ ಬಿಡೋಣ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸವಾಲು ಹಾಕಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ಕೇಸ್‌ಗಳಿಗೆ ನಾವು ಹೆದರುವುದಿಲ್ಲ. ಅವರಿಂದ ಏನೂ ಸಾಧಿಸಲು ಆಗುವುದಿಲ್ಲ ಎಂದರು.
ಯಾರ ಓಲೈಕೆಗಾಗಿ ನೀವು ಎಫ್‌ಐಆರ್ ದಾಖಲಿಸಿದ್ದೀರೆಂಬುದು ಗೊತ್ತಿದೆ. ಹೈಕಮಾಂಡ್ ಖುಷಿಗೊಳಿಸಲು ಹೀಗೆ ಮಾಡಿದ್ದೀರಿ. ಆರ್. ಅಶೋಕ, ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಅವರ ಮೇಲೆ ಎಫ್‌ಐಆರ್ ಆಗಿದೆ ಎಂದು ಕಳಿಸುತ್ತೀರಿ. ರಾಮ ಮಂದಿರ ಉದ್ಘಾಟನೆಗೆ ಅಡ್ಡಿಪಡಿಸಲು ಹೀಗೆಲ್ಲ ಮಾಡುತ್ತಿದ್ದೀರಿ. ಪ್ರತಿಭಟನೆ ನಮ್ಮ ಹಕ್ಕು. ಅದನ್ನು ಮೊಟಕುಗೊಳಿಸುವ ಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
ನಾವು ಯಾವುದೇ ವ್ಯಾಪರಸ್ಥರಿಗೆ ತೊಂದರೆ ಕೊಟ್ಟಿಲ್ಲ. ಹಿಂದು-ಮುಸ್ಲಿಂ ಜಗಳ ಹಚ್ಚಿಲ್ಲ. ಪ್ರತಿಭಟನೆ ದಿನ ಅಂಗಡಿ-ಮುಂಗಟ್ಟು ಬಂದ್ ಮಾಡಿಸಿದ್ದು ಕಾಂಗ್ರೆಸ್ ಸರ್ಕಾರ. ಸರ್ಕಾರವೇ ಪೊಲೀಸರ ಮೂಲಕ ಅಂಗಡಿಗಳನ್ನು ಬಂದ್ ಮಾಡಿಸಿದೆ ಎಂದು ದೂರಿದರು.
ಇದು ಕಾಲಚಕ್ರ. ಇನ್ನು ಆರು ತಿಂಗಳಲ್ಲಿ ಏನು ಆಗುತ್ತದೆ ನೋಡಿ. ಶ್ರೀಕಾಂತ ಪೂಜಾರ ಮೇಲೆ 16 ಕೇಸ್ ಇವೆ ಎಂದು ಕಾಂಗ್ರೆಸ್‌ನವರು ಸುಳ್ಳು ಹೇಳಿದ್ದಾರೆ. ನಾವು ಮುಖ್ಯಮಂತ್ರಿ, ಗೃಹ ಮಂತ್ರಿ ವಿರುದ್ಧ ಚೀಟಿಂಗ್ ಕೇಸ್ ಮಾಡುತ್ತೇವೆ. ನಿಮ್ಮ ಹಿಟ್ಲರ್ ರೂಲ್ ಬಿಟ್ಟುಬಿಡಿ ಎಂದು ಜಾಡಿಸಿದರು.