ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ

siddaramaiah
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಇದೀಗ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದ್ದು, ಪಾರ್ವತಿಗೆ ಸೇರಿದ್ದ ಕೆಸರೆಯ 3.16 ಎಕರೆ ಜಾಗ ನಮ್ಮದು ಎಂದು ಜಾಗದ ಮೂಲ ಮಾಲೀಕರ ಮೊಮ್ಮಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಕೆಸರೆ ಗ್ರಾಮದಲ್ಲಿ 3.16 ಎಕರೆ ಜಮೀನನ್ನು ಜೆ.ದೇವರಾಜು ಎಂಬವರಿಂದ ಮಲ್ಲಿಕಾರ್ಜುನಸ್ವಾಮಿ ಖರೀದಿಸಿ ಸಹೋದರಿ ಪಾರ್ವತಿ (ಸಿಎಂ ಸಿದ್ದರಾಮಯ್ಯ ಪತ್ನಿ)ಗೆ ದಾನ ರೂಪದಲ್ಲಿ ನೀಡಿದ್ದರು. ಈ ಜಮೀನನ್ನು ಮುಡಾ ಭೂ ಸ್ವಾಧೀನ ಪಡಿಸಿಕೊಂಡ ಹಿನ್ನೆಲೆಯಲ್ಲಿ ಪಾರ್ವತಿಗೆ ವಿಜಯನಗರ 3ನೇ ಹಂತದಲ್ಲಿ 14 ಬದಲಿ ನಿವೇಶನಗಳನ್ನು ನೀಡಲಾಗಿತ್ತು. ನಿವೇಶನ ಪಡೆದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಥಮ ಆರೋಪಿಯಾಗಿದ್ದು, ಪಾರ್ವತಿ 2ನೇ, ಮಲ್ಲಿಕಾರ್ಜುನಸ್ವಾಮಿ 3ನೇ ಹಾಗೂ ಜೆ.ದೇವರಾಜು 4ನೇ ಆರೋಪಿ ಯಾಗಿದ್ದಾರೆ.

ನ್ಯಾಯಾಲಯದಲ್ಲಿ ದಾವೆ: ಕೆಸರೆಯಲ್ಲಿರುವ 3.16 ಎಕರೆ ಜಮೀನು ನಮಗೆ ಸೇರಿದ್ದು ಎಂದು ಜಾಗದ ಮೂಲ ಮಾಲೀಕರ ಮೊಮ್ಮಗಳಾದ ಜಮುನಾ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪಾರ್ವತಿ, ಜೆ.ದೇವರಾಜು, ಮುಡಾ ಆಯುಕ್ತರು, ಜಿಲ್ಲಾಧಿಕಾರಿ ಸೇರಿದಂತೆ 12 ಜನರ ಮೇಲೆ ನ.23 ರಂದು ದಾವೆ ಹೂಡಿದ್ದಾರೆ.

ಕೆಸರೆ ಗ್ರಾಮದ 3.16 ಎಕರೆ ಜಮೀನಿನ ಮೂಲ ಮಾಲೀಕ ನಿಂಗ ಅಲಿಯಾಸ್ ಜವರ. ಇವರಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ಜೆ. ದೇವರಾಜು ಎಂಬ ಮೂವರು ಗಂಡು ಮಕ್ಕಳು ಇದ್ದಾರೆ. ಜವರ ನವರ ನಿಧನದ ನಂತರ ಈ ಆಸ್ತಿ ಮೈಲಾರಯ್ಯ ಹೆಸರಿಗೆ ವರ್ಗಾವಣೆ ಆಯಿತು. ಈ 3.16 ಎಕರೆ ಜಮೀನನ್ನು ಜೆ.ದೇವರಾಜು ಮೋಸದಿಂದ ತಮ್ಮದಾಗಿಸಿಕೊಂಡು ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನಸ್ವಾಮಿಗೆ ಮಾರಾಟ ಮಾಡಿದ್ದಾರೆ ಎಂಬುದು ಜಮುನಾ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಜಮುನಾ ಸಹೋದರ ಮಂಜುನಾಥಸ್ವಾಮಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಮ್ಮ ಚಿಕ್ಕಪ್ಪ ದೇವರಾಜು ಮೋಸದಿಂದ ನಮ್ಮಿಂದ ಜಮೀನು ಪಡೆದು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಜಮೀನು ನಮ್ಮ ತಾತ ಜವರ ಅವರಿಂದ ನನ್ನ ತಂದೆ ಮೈಲಾರಯ್ಯ ಹೆಸರಿಗೆ ಬಂದಿತ್ತು. ಜಮೀನನ್ನು ನಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ನಮ್ಮ ಚಿಕ್ಕಪ್ಪ ದೇವರಾಜು ನಮ್ಮನ್ನು ನಂಬಿಸಿ ನನ್ನ ಹಾಗೂ ತಾಯಿಯ ಬಳಿ ಸಹಿ ಪಡೆದುಕೊಂಡರು. ಆದರೆ, ನನ್ನ ಸಹೋದರಿ ಜಮುನಾ ಇದಕ್ಕೆ ಸಹಿ ಹಾಕಿರಲಿಲ್ಲ. ನಾವು ಹಾಕಿದ ಸಹಿಯನ್ನು ದೇವರಾಜು ದುರ್ಬಳಕೆ ಮಾಡಿಕೊಂಡು ಜಮೀನನ್ನು ತಮ್ಮದಾಗಿಸಿಕೊಂಡರು. ಆ ನಂತರ ಜಮೀನನ್ನು ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದ್ದರು. ಮುಡಾ ಹಗರಣ ಬಯಲಿಗೆ ಬಂದ ನಂತರ ಈ ಎಲ್ಲ ವಿಚಾರ ನಮಗೆ ತಿಳಿಯಿತು. ಸಹೋದರಿ ನಡೆಸುತ್ತಿರುವ ಹೋರಾಟಕ್ಕೆ ನ್ಯಾಯ ದೊರೆಯುವ ನಿರೀಕ್ಷೆ ಇದೆ. ಈ ಹೋರಾಟಕ್ಕೆ ನನ್ನ ಬೆಂಬಲ ಸಹ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net