ಜಲಪಾತಕ್ಕೆ ತೆರಳಿದ 29 ಜನರ ಮೇಲೆ ಕೇಸ್

SP Vikram Amate
Published on

ಮೂಡಿಗೆರೆ: ನಿರಂತರ ಮಳೆಯಾಗುತ್ತಿರುವುದರಿಂದ ಚಾರ್ಮಾಡಿ ಘಾಟ್ ಪ್ರದೇಶದ ಅಲ್ಲಲ್ಲಿ ಜಲಪಾತಗಳು ಸೃಷ್ಟಿಯಾಗಿವೆ. ಪ್ರವಾಸಿಗರು ಅಪಾಯಕಾರಿ ಸ್ಥಳಕ್ಕೆ ತೆರಳುತ್ತಿರುವ ಕಾರಣ ಅವರನ್ನು ನಿಯಂತ್ರಿಸಲು ಘಾಟ್ ರಸ್ತೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿದ್ದು, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ.ವಿಕ್ರಂ ಅಮಾಟೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಜಲಪಾತಗಳ ಅಪಾಯಕಾರಿ ಸ್ಥಳಕ್ಕೆ ತೆರಳದಂತೆ ಜಲಪಾತಗಳ ಬಳಿ ಬ್ಯಾರಿಕೇಡ್ ಅಳವಡಿಸಿ ಟೇಪ್ ಕಟ್ಟಲಾಗಿದೆ. ಅಲ್ಲಲ್ಲಿ ಸೂಚನಾ ಫಲಕಗಳನ್ನು ಹಾಕಲಾಗಿದೆ. ರಸ್ತೆ ಬದಿ ವಾಹನ ಸವಾರರಿಗೆ ತೊಂದರೆಯಾಗದಂತೆ ಪ್ರವಾಸಿಗರ ವಾಹನ ನಿಲುಗಡೆಗೊಳಿಸಬಾರದು ಎಂದು ಸೂಚಿಸಲಾಗಿದೆ. ದೇವರಮನೆ ಪ್ರವಾಸಿ ತಾಣಕ್ಕೆ ತೆರಳುವ ರಸ್ತೆಯಲ್ಲಿ ಕೇಕ್ ಕತ್ತರಿಸಿ ಜನ್ಮದಿನಾಚರಣೆ ಆಚರಿಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ಒಂಭತ್ತು ಮಂದಿ ಹಾಗೂ ಘಾಟ್ ರಸ್ತೆಯ ಜಲಪಾತಗಳ ಅಪಾಯಕಾರಿ ಸ್ಥಳಕ್ಕೆ ತೆರಳಿರುವ 20 ಮಂದಿ ಸೇರಿ ಒಟ್ಟು 29 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಚಾರ್ಮಾಡಿ ಘಾಟ್ ಹೆದ್ದಾರಿಯ ಆಲೆಖಾನ್ ಹೊರಟ್ಟಿ ತಿರುವಿನಲ್ಲಿ ಹೈವೆ ಪ್ಯಾಟ್ರೋಲ್ ವಾಹನ ನಿಲ್ಲಿಸಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗುತ್ತಾರೆ ಅಪಾಯಕಾರಿ ಸ್ಥಳವಾದ್ದರಿಂದ ಅಲ್ಲಿ ಪೊಲೀಸರು ನಿತ್ಯ ವಾಹನ ತಪಾಸಣೆ ಮಾಡುತ್ತಿರುವುದರಿಂದ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ತೊಂದರಿಯಾಗುತ್ತಿದೆ ಎಂದು ಸುದ್ದಿಗಾರರು ಎಸ್ಪಿ ವಿಕ್ರಂ ಅಮಾಟೆ ಅವರ ಗಮನ ಸೆಳೆದಾಗ, ಅಂತಹ ಸ್ಥಳದಲ್ಲಿ ವಾಹನ ತಪಾಸಣೆ ನಡೆಸುವುದು ಬೇಡ. ಹೈವೆ ಪ್ಯಾಟ್ರೋಲ್ ವಾಹನದಲ್ಲಿ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಗಸ್ತು ತಿರುಗಲಿ ಎಂದು ಮೂಡಿಗೆರೆ ಸಿಪಿಐ ರಾಜಶೇಖರ್‌ಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net