

ಮೈಸೂರು: ನಗರದ ಗನ್‌ಹೌಸ್ ವೃತ್ತದ ಬಳಿ ಮುಖ್ಯಮಂತ್ರಿ ಅವರ ಕಾನ್ವೆಗೆ ಅಡ್ಡಿಪಡಿಸಿದ ಬೈಕ್ ಸವಾರನ ವಿರುದ್ಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರುಣ ಗ್ರಾಮದ ಕುಂಬ್ರಳ್ಳಿ ನಿವಾಸಿ ಶಿವು (30) ಎಂಬಾತನೇ ಮುಖ್ಯಮಂತ್ರಿ ಅವರ ಕಾನ್ವೆಗೆ ಅಡ್ಡಿಪಡಿಸಿದ ವ್ಯಕ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೂ.23 ರಂದು ನಗರಕ್ಕೆ ಭೇಟಿ ನೀಡಿದ್ದರು. ಮುಖ್ಯಮಂತ್ರಿ ಕಾರು ಹಾಗೂ ಬೆಂಗಾವಲು ಪಡೆಯ ವಾಹನಗಳು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಗನ್‌ಹೌಸ್ ವೃತ್ತದ ಕಡೆಗೆ ಆಗಮಿಸುತಿತ್ತು. ಹೀಗಾಗಿ ಗನ್‌ಹೌಸ್‌ನಿಂದ ನಂಜನಗೂಡು ರಸ್ತೆಗೆ ತೆರಳುವ ಎಲ್ಲ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು.
ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದರು. ಈ ಸಂದರ್ಭ ಶಿವು ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್‌ನಲ್ಲಿ ಬರುತ್ತಿರುವುದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಬೈಕ್ ನಿಲ್ಲಿಸುವಂತೆ ಸೂಚಿಸಿದರು. ಆದರೆ, ಶಿವು ಪೊಲೀಸರ ಸೂಚನೆ ಲೆಕ್ಕಿಸದೆ ಪೊಲೀಸ್ ಪೇದೆ ಉಪೇಂದ್ರ ಅವರಿಗೆ ಡಿಕ್ಕಿ ಹೊಡೆದು ಬ್ಯಾರಿಕೇಡ್‌ಗಳನ್ನು ಬೇಧಿಸಿ ಮುಖ್ಯಮಂತ್ರಿ ಬರುತ್ತಿದ್ದ ಮಾರ್ಗದ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ತಕ್ಷಣ ಆತನನ್ನು ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಕರ್ತವ್ಯದಲ್ಲಿದ್ದ ಪೊಲೀಸರು ನೀಡಿದ ದೂರಿನ ಮೇರೆಗೆ ಬೈಕ್ ಸವಾರ ಶಿವು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.